ಸಂವಿಧಾನದಿಂದ ಎಲ್ಲರಿಗೂ ಸಮಾನ ಅವಕಾಶ

MDG2 (6)
Published on

ಮೂಡಿಗೆರೆ: ಮಹಿಳೆಯರು ಮತ್ತು ಮಕ್ಕಳು ಶೋಷಣೆ ಒಳಗಾದರೆ ಅವರ ರಕ್ಷಣೆಗೆ ಕಠಿಣ ಕಾನೂನು ಜಾರಿಯಲ್ಲಿದ್ದು, ಸಂತ್ರಸ್ತರು ಕಾನೂನಿನ ಮೊರೆ ಹೋಗಿ ರಕ್ಷಣೆ ಪಡೆಯಬಹುದು ಎಂದು ಮೂಡಿಗೆರೆ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಎ.ವಿಶ್ವನಾಥ್ ತಿಳಿಸಿದರು.

ವಿಮುಕ್ತಿ ಚಾರಿಟೆಬಲ್ ಟ್ರಸ್ಟ್, ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದಿಂದ ಶುಕ್ರವಾರ ಪಟ್ಟಣದ ಚರ್ಚ್ ಸಭಾ ಭವನದಲ್ಲಿ ನಡೆದ ಮಹಿಳೆಯರಿಗೆ ಉಚಿತ ಕಾನೂನು ಸಲಹೆ ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಸಂವಿಧಾನ ಮಹಿಳೆಯರಿಗೆ ರಾಷ್ಟ್ರಪತಿಯಂತಹ ಮಹತ್ವದ ಹುದ್ದೆ ನೀಡಿದೆ. ಜಾತಿ, ಧರ್ಮ, ಪುರುಷ, ಮಹಿಳೆ ಎಂಬ ಭೇದವಿಲ್ಲದೆ ಸರ್ವರಿಗೂ ಸಮಾನತೆ ಒದಗಿಸಿದೆ ಎಂದರು.

ಸಂವಿಧಾನ ಬದ್ಧವಾದ ಉನ್ನತ ಹುದ್ದೆ ಮತ್ತು ಹಕ್ಕುಗಳನ್ನು ಪಡೆಯಲು ಮಹಿಳೆಯರು ಹಿಂಜರಿಯ ಬಾರದು. ಕಾನೂನು ಬಿಗಿಯಾಗಿರುವ ಕಾರಣ ಮಹಿಳೆಯರು ಮತ್ತು ಮಕ್ಕಳ ಮೇಲೆ ಶೋಷಣೆ ಕಡಿಮೆಯಾಗುತ್ತಿದೆ. ಅಪರಾಧ, ದೌರ್ಜನ್ಯ, ಕಾನೂನಿನ ಉಲ್ಲಂಘನೆಯಂತಹ ಪ್ರಕರಣಗಳು ಕಡಿಮೆಯಾದರೆ ಸಮಾಜ ಸುಸಂಸ್ಕೃತ ಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ತಿಳಿಸಿದರು.

ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಫಾ.ಅರುಣ್ ಲೋಬೊ, ಚರ್ಚ್ ಧರ್ಮಗುರು ಫಾ. ಸುನಿಲ್ ರೋಡ್ರಿಗಸ್, ವಿಮುಕ್ತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಆತಿಕಾ ಭಾನು, ಸರ್ಕಾರಿ ಅಭಿಯೋಜಕಿ ಟಿ.ರೂಪ, ವಕೀಲರ ಸಂಘದ ಅಧ್ಯಕ್ಷ ಎಚ್.ಕೆ.ದೇವರಾಜ್, ಕಾರ್ಯದರ್ಶಿ ಎಂ.ಎಂ.ರಾಘವೇಂದ್ರ, ವಕೀಲೆ ಜೆ.ಎನ್.ಭಾಗ್ಯ, ನವೀನ್ ಆನೆದಿಬ್ಬ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net