

ಬೇಲೂರು: ಸಂವಿಧಾನ ದಿನಾಚರಣೆ ಅಂಗವಾಗಿ ಪಟ್ಟಣದ ಡಾ.ಅಂಬೇಡ್ಕರ್ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಂಗಳವಾರ ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ಮಾಲಾರ್ಪಣೆ ಮಾಡುವುದರ ಜತೆಗೆ ನೆರೆದಿದ್ದವರಿಗೆ ಸಂವಿಧಾನದ ಪೀಠಿಕೆ ಬೋಧಿಸಲಾಯಿತು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಭಾವೈಕ್ಯ, ಸಹೋದರತೆ, ಸಮಾನತೆ ಹಾಗೂ ಸಮ ಸಮಾಜ ನಿರ್ಮಾಣಕ್ಕಾಗಿ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ವಿಶ್ವಕ್ಕೆ ಮಾದರಿ. ಸಂವಿಧಾನವನ್ನು ಅಂಬೇಡ್ಕರ್ ಅವರು ದೇಶಕ್ಕೆ ಸಮರ್ಪಿಸಿ 75 ವರ್ಷವಾಗಿದ್ದು, ಈ ದಿನವನ್ನು ದೇಶವೇ ಆಚರಿಸುತ್ತಿದೆ ಎಂದರು.
ಸಂವಿಧಾನದ ಆಶಯಗಳು ಈಡೇರುವುದರ ಜತೆಗೆ ಎಲ್ಲರಿಗೂ ತಿಳಿಸಬೇಕು ಎಂಬ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2009ರಿಂದ ಸಂವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ನಾವೆಲ್ಲರೂ ಸಂವಿಧಾನವನ್ನು ಓದುವುದರ ಜತೆಗೆ ಅರ್ಥೈಸಿಕೊಳ್ಳಬೇಕು ಎಂದರು.
ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನ ರಚಿಸಿ 75 ವರ್ಷ ತುಂಬಿದೆ. ಸಂವಿಧಾನದ ಬಗ್ಗೆ ನಾವು ಅಲ್ಪಸ್ವಲ್ಪ ತಿಳಿದಿದ್ದೇವೆ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು, ಅವಕಾಶಗಳನ್ನು ಕಲ್ಪಿಸಿ ಕೊಟ್ಟಿದ್ದರಿಂದಲೇ ನಾವು ಇಂದು ದೇಶದಲ್ಲಿ ಉತ್ತಮ ಪ್ರಜೆಗಳಾಗಿ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗಿದೆ. ಆದ್ದರಿಂದ ದೇಶದ ಪ್ರತಿಯೊಬ್ಬ ಪ್ರಜೆಯೂ ಇದನ್ನು ಗೌರವಿಸಿ, ಕಾನೂನನ್ನು ಪಾಲಿಸಿ ಮುನ್ನಡೆಯಬೇಕು ಎಂದರು.
ತಹಸೀಲ್ದಾರ್ ಎಂ.ಮಮತಾ ಮಾತನಾಡಿ, ಸಂವಿಧಾನ ಅಂಗೀಕಾರವಾದ ದಿನವನ್ನು ಆಚರಿಸಿದರೆ ಸಾಲದು. ಇದಕ್ಕೆ ಕಾರಣರಾದ ಡಾ.ಅಂಬೇಡ್ಕರ್ ಅವರನ್ನು ಪ್ರತಿ ದಿನ ನೆನಪಿಸಿಕೊಳ್ಳಬೇಕು. ಸಂವಿಧಾನ ಜತೆಗೆ ಅಂಶಗಳನ್ನು ಯುವ ಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ದಲಿತ ಮುಖಂಡರಾದ ಪರ್ವತಯ್ಯ, ಮರಿಯಪ್ಪ, ಕುಮಾರ್, ದಸಂಸ(ಅಂಬೇಡ್ಕರ್ ವಾದ) ಮುಖಂಡ ಲಕ್ಷ್ಮಣ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಸಿಬ್ಬಂದಿ ನಾಗೇಶ್, ಯೋಗಯ್ಯ, ಅಶ್ವಿನಿ, ಅಭಿ, ಲಕ್ಷ್ಮೀ, ಆಶಾ, ಪುರಸಭೆ ಆರೋಗ್ಯಾಧಿಕಾರಿ ಲೋಹಿತ್ ಇತರರಿದ್ದರು.