

ಬಳ್ಳಾರಿ: ಸಂವಿಧಾನ ರಕ್ಷಿಸುವ ಉದ್ದೇಶದಿಂದ ಏ.26 ರಂದು ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ ಆಯೋಜಿಸಲಾಗಿದೆ ಎಂದು ಎದ್ದೇಳು ಕರ್ನಾಟಕ ಸಂಘಟನೆ ಜಿಲ್ಲಾ ಸಂಚಾಲಕ ಕುಮಾರ ಸಮತಳ್ ಹೇಳಿದರು.
ಇದನ್ನೂ ಓದಿ:
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶದಲ್ಲಿ ಹತ್ತು ಸಾವಿರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಚಿತ್ರನಟ ಪ್ರಕಾಶ್ ರಾಜ್, ಹೋರಾಟಗಾರ್ತಿ ಮೇಧಾ ಪಾಟ್ಕರ್, ಆರ್ಥಿಕ ತಜ್ಞ ಪರಕಾಲ ಪ್ರಾಕರ್ ಸೇರಿ ಅನೇಕ ಮುಖಂಡರು ಭಾಗವಹಿಸಲಿದ್ದಾರೆ. ಎಲ್ಲ ಗ್ರಾಮಗಳಲ್ಲಿ ಸಂವಿಧಾನ ಸಂರಕ್ಷಕ ಪಡೆ ಹೆಸರಿನಲ್ಲಿ ದೇಶಪ್ರೇಮಿ ತಂಡಗಳನ್ನು ರಚಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಮೂರು ವರ್ಷಗಳಲ್ಲಿ ಲಕ್ಷ ಕಾರ್ಯಕರ್ತರು ಸೇರುವ ಗುರಿ ಹೊಂದಲಾಗಿದೆ ಎಂದರು.
ಯಾವ ಪಕ್ಷದಿಂದಲೂ ದೇಶ ರಕ್ಷಿಸಲು ಸ್ಯಾಧ್ಯವಿಲ್ಲ. ನಾಗರಿಕರು ಪ್ರಬಲ ಸಾಮಾಜಿಕ ಶಕ್ತಿಯಾಗಿ ರೂಪುಗೊಳ್ಳಬೇಕಿದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬಲ್ಲ, ಆಳುವವರನ್ನು ಪ್ರಶ್ನಿಸಬಲ್ಲ, ಆಳ್ವಿಕೆಯನ್ನು ಬದಲಿಸಬಲ್ಲ, ನಾಗರಿಕ ಶಕ್ತಿಯಾಗಿ ತಳಮಟ್ಟದಿಂದ ದೇಶ ಮಟ್ಟದವರೆಗೂ ನಮ್ಮನ್ನು ನಾವು ಕಟ್ಟಿಕೊಳ್ಳಬೇಕಿದೆ ಎಂದು ತಿಳಿಸಿದರು. ಪ್ರಮುಖರಾದ ಕೆ.ಇ.ಚಿದಾನಂದಪ್ಪ, ಎನ್.ಡಿ.ವೆಂಕಮ್ಮ, ಎಂ.ಎಲ್.ಕೆ.ನಾಯ್ಡು, ಕೃಷ್ಣ ಇತರರಿದ್ದರು.