

ಮಂಡ್ಯ: ಭಾರತೀಯರು ಸಂವಿಧಾನದ ಆಶಯದಂತೆ ಬದುಕಿದರೆ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಪರಿವರ್ತನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ, ಸಮಾನ ಮನಸ್ಕರ ವೇದಿಕೆ ಸಹಯೋಗದಲ್ಲಿ 75ನೇ ವರ್ಷದ ಸಂವಿಧಾನ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನ ಸಂಭ್ರಮಾಚರಣೆಯಲ್ಲಿ ಮಾತನಾಡಿದರು.
ಸಂವಿಧಾನ ನಮ್ಮ ಬದುಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟಂತ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯ ಮನೆಯಲ್ಲಿ ಮತ್ತು ಮನಸ್ಸಿನಲ್ಲಿಟ್ಟುಕೊಂಡು ಪೂಜಿಸಬೇಕು. ಲಿಖಿತ ಸಂವಿಧಾನ ಹೊಂದಿದರುವ ಭಾರತ ವಿಶ್ವದಲ್ಲಿಯೇ ಮಾದರಿ ಎನ್ನಿಸಿಕೊಂಡಿದೆ. 1949ರಲ್ಲಿ ಬಹುತೇಕ ರಾಷ್ಟ್ರ ಅಲಿಖಿತ ಸಂವಿಧಾನವಿತ್ತು. ಭಾರತ ಲಿಖಿತ ಸಂವಿಧಾನವನ್ನು ಅಂಗೀಕರಿಸಿ ವೇಳೆ ಸಾಕಷ್ಟು ಸಮಸ್ಯೆಗಳಿದ್ದವು. ಬಡತನ, ಅನಕ್ಷರತೆ, ಮೂಢನಂಬಿಕೆ, ಮೌಢ್ಯತೆ ಇದ್ದವು. ಇವುಗಳಿಗೆ ಸಂವಿಧಾನ ಹೊಂದಿಕೊಳ್ಳಲಿದೆಯೇ ಎನ್ನುವ ಭಾವನೆ ಬೇರೆ ರಾಷ್ಟ್ರಗಳದ್ದಾಗಿತ್ತು. ಸಂವಿಧಾನ ಸರಾಸರಿ 20 ರಿಂದ 25 ವರ್ಷ ಮಾತ್ರ ಜಾರಿಯಲ್ಲಿರಬಹುದು. ನಂತರ ಬದಲಾವಣೆ ಮಾಡಲಿಕ್ಕೆ ಸಾಧ್ಯವಾಗಬಹುದು ಎಂದು ವಿದೇಶಿ ರಾಷ್ಟ್ರಗಳು ಮಾತನಾಡಿಕೊಳ್ಳುತ್ತಿದ್ದವು. ಆದರೆ 75 ವರ್ಷ ತುಂಬಿವೆ ಎಂದರು.
ಅಕ್ಕ ಐಎಎಸ್ ಅಕಾಡೆಮಿ ಮುಖ್ಯಸ್ಥ ಡಾ.ಶಿವಕುಮಾರ್, ಭಾರತದ ಸಂವಿಧಾನ ಲಿಖಿತವಾಗಿದ್ದು, ಪ್ರಪಂಚದಲ್ಲಿಯೇ ದೊಡ್ಡ ಸಂವಿಧಾನ ಎಂಬ ಹೆಗ್ಗಳಿಕೆ ಹೊಂದಿದೆ. ಸಂವಿಧಾನ ಎಂದರೆ ಕಾನೂನು ಗ್ರಂಥವಾಗಿದ್ದು, ಇದರ ಮೂಲಕವೇ ಎಲ್ಲರಿಗೂ ಹಕ್ಕು ಮತ್ತು ಸೌಲಭ್ಯ ದೊರೆಯುತ್ತಿರುವುದು ಎಂದು ನುಡಿದರು.
ಜಿ.ಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ.ಸಿದ್ದಲಿಂಗೇಶ್, ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಕೆ.ಮಂಜುಳಾ, ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಹೋರಾಟಗಾರ್ತಿ ಸುನಂದಾ ಜಯರಾಂ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ವಿವಿಧ ಸಂಘಟನೆಯ ಎಲ್.ಸಂದೇಶ್, ಎಸ್.ನಾರಾಯಣ್, ನಗರಸಭಾ ಸದಸ್ಯರಾದ ಶ್ರೀಧರ್, ಗೀತಾ, ಶಿವಪ್ರಕಾಶ್, ಹರೀಶ, ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಪರಿವರ್ತನಾ ಸಂಸ್ಥೆಯ ಕಾರ್ಯದರ್ಶಿ ಟಿ.ಡಿ.ನಾಗರಾಜ್, ನಿರ್ದೇಶಕ ಮುಕುಂದ ಹಾಲಹಳ್ಳಿ, ನರಸಿಂಹಮೂರ್ತಿ, ಲಂಕೇಶ್ ಮಂಗಲ, ದಸಂಸ ಮುಖಂಡ ಎಂ.ವಿ.ಕೃಷ್ಣ, ಶಿವರುದ್ರಯ್ಯ ಇತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಿಂದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಚಾಲನೆ ನೀಡಿದರು. ಸಂವಿಧಾನ ಪೀಠಿಕೆಯನ್ನು ಅಲಂಕಾರಗೊಂಡ ಅಶ್ವರೂಢ ಬೆಳ್ಳಿಲೇಪಿತ ವಾಹನದಲ್ಲಿ ವಿವಿಧ ಕಲಾತಂಡಗಳ ತಮಟೆ-ನಗಾರಿ-ಕಹಳೆ ಪೂಜಾ ಕುಣಿತದ ಮೂಲಕ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಜಾಗೃತಿ ಮೂಡಿಲಾಯಿತು.