

ಮಡಿಕೇರಿ: ಕೊಡವಲ್ಯಾಂಡ್ ಹಕ್ಕೊತ್ತಾಯದ ಪ್ರತಿಪಾದನೆಯ ನಿರಂತರತೆಗಾಗಿ ನ.೨೬ ರಂದು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ೩೪ನೇ ವರ್ಷದ ಕೊಡವ ನ್ಯಾಷನಲ್ ಡೇ ಮತ್ತು ಭಾರತದ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಡಿಕೇರಿಯ ಹೊರ ವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲಾ ಕೊಡವರು ಪಾಲ್ಗೊಳ್ಳುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಮನವಿ ಮಾಡಿದ್ದಾರೆ.
ಭಾರತದ ಸಾರ್ವಭೌಮತ್ವ ಮತ್ತು ಪ್ರಭುತ್ವದಡಿಯಲ್ಲಿ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯನ್ನು ಸಾಧಿಸಲು ಮತ್ತು ವಿಶ್ವರಾಷ್ಟ್ರ ಮಾನ್ಯತೆಯೊಂದಿಗೆ ಆದಿಮಸಂಜಾತ ಕೊಡವರಿಗೆ ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಪರಿಗಣನೆ ಮತ್ತು ಕೊಡವರ ಇತರೆ ಹತ್ತು ಶಾಸನ ಬದ್ಧ ಗುರಿಗಳು ಮತ್ತು ಅಶೋತ್ತರಗಳಿಗಾಗಿ ಸಂವಿಧಾನಿಕ ಹಕ್ಕೊತ್ತಾಯಗಳನ್ನು ಸಿಎನ್‌ಸಿ ಪ್ರತಿಪಾದಿಸುತ್ತ ಬಂದಿದೆ. ಕೊಡವ ಲೋಕದ ಸಾಕ್ಷಿ ಪ್ರಜ್ಞೆಯಾದ ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್‌ಸಿ) ಅಡಿಯಲ್ಲಿ ಇವುಗಳನ್ನು ಕಳೆದ ೩೪ ವರ್ಷಗಳಿಂದ ನಿರಂತರವಾಗಿ ಮುನ್ನಲೆಗೆ ತರಲಾಗಿದೆ ಎಂದರು.
ರಾಜ್ಯ ಪ್ರಾಯೋಜಿತ ವರ್ಣಭೇದ ನೀತಿಯನ್ನು ಹೋಗಲಾಡಿಸಲು, ಕೊಡವ ಸ್ವಯಂ-ಆಡಳಿತ ಮತ್ತು ಆಂತರಿಕ ಸ್ವ-ನಿರ್ಣಯದ ಹಕ್ಕುಗಳನ್ನು ಸಂವಿಧಾನದಿಂದ ಗುರುತಿಸುವುದು ಒಂದೇ ಪರಿಹಾರವಾಗಿದೆ. ಕೊಡವ ಲ್ಯಾಂಡ್ ನಾದ್ಯಂತ ಇರುವ ಕೊಡವ ಬಂಧುಗಳು, ಸಹೋದರ ಸಹೋದರಿಯರು ಹಾಗೂ ಹೊರಗಿರುವ ಕೊಡವರು ಪವಿತ್ರ ತೀರ್ಥಯಾತ್ರೆಯಂತೆ ಪರಿಗಣಿಸಿ ಕೊಡವ ನ್ಯಾಷನಲ್ ಡೇಯಲ್ಲಿ ಪಾಲ್ಗೊಳ್ಳುವಂತೆ ಎನ್.ಯು.ನಾಚಪ್ಪ ಮನವಿ ಮಾಡಿದ್ದಾರೆ.
-ಎನ್.ಯು.ನಾಚಪ್ಪ