

ಮಂಡ್ಯ: ಎಲ್ಲ ಕಾನೂನುಗಳ ಮೂಲ ಸಂವಿಧಾನ. ಆದ್ದರಿಂದ ಇದು ತಾಯಿ ಬೇರು ಇದ್ದಂತೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು(ಮಾಜಿ ಪುರಸಭೆ) ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ, ವಕೀಲರ ಸಂಘ, ಅನನ್ಯ ಹಾರ್ಟ್ಸ್, ನೆಹರು ಯುವ ಕೇಂದ್ರ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದ ಬಗ್ಗೆ ಎಲ್ಲರೂ ತಿಳಿದುಕೊಂಡಲ್ಲಿ ಮಾತ್ರ ಉತ್ತಮ ಪ್ರಜೆಯಾಗಿ ಬಾಳಲು ಸಾಧ್ಯ. ನಾವು ಮೂಲ ಹಕ್ಕುಗಳನ್ನು ಪಡೆಯುವಂತೆ ಮೂಲ ಕರ್ತವ್ಯವನ್ನು ಪಾಲಿಸಬೇಕಾಗಿದೆ. ಎಲ್ಲರಿಗೂ ಸಮಾನವಾದ ಹಕ್ಕುಗಳಿದ್ದು, ಅದಕ್ಕೆ ಧಕ್ಕೆ ಬಂದಲ್ಲಿ ಕಾನೂನು ಬದ್ಧವಾಗಿ ಹೋರಾಟ ಮಾಡಿ ತಮ್ಮ ಹಕ್ಕುಗಳನ್ನು ಪಡೆಯಬಹುದಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ ಮಾತನಾಡಿ, ಸಂವಿಧಾನವಿಲ್ಲದಿದ್ದರೆ ನಮಗೆ ಉನ್ನತ ಹುದ್ದೆ ಸಿಗುತ್ತಿರಲಿಲ್ಲ. ಮಾತ್ರವಲ್ಲದೆ ನಮ್ಮ ನ್ಯಾಯಬದ್ಧ ಹಕ್ಕುಗಳನ್ನು ಪಡೆದುಕೊಳ್ಳುತ್ತಿದ್ದೇವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು, ಮುಖ್ಯಶಿಕ್ಷಕ ಮಲ್ಲಿಕಾರ್ಜುನಯ್ಯ, ನೆಹರು ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ರವಿಚಂದ್ರನ್, ಅನನ್ಯ ಹಾರ್ಟ್ಸ್ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ, ಶಾಲಾ ಶಿಕ್ಷಣ ಇಲಾಖೆ ಕಾರ್ಯಕ್ರಮ ಸಂಯೋಜಕ ಮಧು ಇತರರಿದ್ದರು.