ಸಂವಿಧಾನ ಭಾರತೀಯರ ಧೈರ್ಯ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

Constitution Day Celebration Mandya
Published on

ಮಂಡ್ಯ: ಸಂವಿಧಾನ ಎಂಬುವುದು ಪ್ರತಿ ಭಾರತೀಯ ಪ್ರಜೆಯ ಧೈರ್ಯ ಹಾಗೂ ಎದೆಯ ಧ್ವನಿ ಇದ್ದಂತೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು(ಕಲ್ಲು ಕಟ್ಟಡ) ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮೈ ಭಾರತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಮಾಜ ಕಲ್ಯಾಣ ಇಲಾಖೆ, ನೆಹರು ಯುವ ಕೇಂದ್ರ, ನಗರಸಭೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅನನ್ಯ ಹಾರ್ಟ್ ಸಂಸ್ಥೆ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಕಲ್ಲು ಕಟ್ಟಡ) ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಂವಿಧಾನವನ್ನು ಪ್ರತಿಯೊಬ್ಬರೂ ಆತ್ಮ ಪೂರ್ವಕವಾಗಿ ಹಾಗೂ ಆತ್ಮ ಗೌರವವನ್ನು ಹೊಂದಿ ಆರಾಧಿಸಬೇಕು. ಭಾಷೆ ಹಾಗೂ ಭೌಗೋಳಿಕತೆಯ ಆಧಾರದಲ್ಲಿ ಭಾವನಾತ್ಮಕ ಸಂಕೇತವಾಗಿರುವಂತಹ ಗಣರಾಜ್ಯ ದಿನವೂ ಎಷ್ಟು ಪವಿತ್ರ ಹಾಗೂ ಪ್ರಾಮುಖ್ಯವಾದ ದಿನವೋ ಅದೇ ರೀತಿ ನ.26ರ ಸಂವಿಧಾನ ದಿನವು ಅಷ್ಟೇ ಮುಖ್ಯವಾಗಿದೆ. ಸಂವಿಧಾನ ದಿನಾಚರಣೆ ಎಂದರೆ ಭಾರತೀಯರೆಲ್ಲರಿಗೂ ಕೂಡ ವಿಶೇಷವಾದ ದಿನ. ನಮ್ಮ ಸಂವಿಧಾನವನ್ನು ವಿಧ್ಯುಕ್ತವಾಗಿ ಅಧಿಕಾರ ಮಾಡಿಕೊಂಡಂತಹ ಈ ದಿನ ಭಾರತೀಯರೆಲ್ಲರಿಗೂ ಕೂಡ ಒಂದು ಹೊಸ ಚೈತನ್ಯವನ್ನು ಮೂಡಿಸಿದಂತಹ ದಿನವಿದು ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ಪ್ರಪಂಚ ಕಂಡಂತಹ ಮಹಾನ್ ಚೇತನ. ಪ್ರಾಯಶಃ ಅವರು ಈ ದೇಶದಲ್ಲಿ ಜನಿಸದಿದ್ದರೆ ಇಂದಿಗೂ ಸಹ ಇಂತಹ ಶಕ್ತಿಯುತವಾದ ಸಂವಿಧಾನವನ್ನು ರಚನೆ ಮಾಡುವುದಕ್ಕೆ ಸಾಧ್ಯವೇ ಇರಲಿಲ್ಲ. ಸಂವಿಧಾನದ ಮಹತ್ವವನ್ನು ಪ್ರತಿ ಮಕ್ಕಳಿಗೂ ತಿಳಿಸಬೇಕು. ಸಂವಿಧಾನವನ್ನು ರಾತ್ರೋರಾತ್ರಿ ಬರೆದಿದ್ದಲ್ಲ ಅಥವಾ ಹಗಲು ರಾತ್ರಿ ಕುಳಿತು ಒಂದೆರೆಡು ವಾರ ಬರೆದಿರುವುದಿಲ್ಲ. ಇದರ ಹಿಂದೆ ಅನೇಕ ಪುಣ್ಯಾತ್ಮರ ಶ್ರಮವಿದೆ, ತ್ಯಾಗವಿದೆ. ಎಷ್ಟೋ ಅವಮಾನವನ್ನೆಲ್ಲ ಮೀಟಿ ಇಡೀ ಜಗತ್ತಿನಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನವನ್ನು ಕೊಟ್ಟಂತಹ ಮಹಾನ್ ಪುರುಷನನ್ನು ನೆನೆಯಬೇಕು ಎಂದು ತಿಳಿಸಿದರು.

ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಸಂವಿಧಾನವು ಪ್ರತಿಯೊಬ್ಬರನ್ನು ಸಮಾನ ದೃಷ್ಟಿಯಲ್ಲಿ ಕಾಣುವಂತಹ ಒಂದು ದೊಡ್ಡ ಮಾನವೀಯತೆಯ ಧರ್ಮ. ಸಂವಿಧಾನದ ಹಕ್ಕು ಹಾಗೂ ಕರ್ತವ್ಯಗಳಲ್ಲಿ ಪ್ರತಿಯೊಬ್ಬ ಭಾರತೀಯರಿಗೂ ಸಮಾನ ಹಕ್ಕಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಿದರು. ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಅರುಣ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ.ಸಿದ್ದಲಿಂಗೇಶ್, ಡಿಡಿಪಿಯು ಸಿ.ಚೆಲುವಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್.ರಾಮಮೂರ್ತಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ನೆಹರು ಯುವ ಕೇಂದ್ರದ ಮುಖ್ಯಲೆಕ್ಕಾಧಿಕಾರಿ ರವಿಚಂದ್ರನ್, ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಯ್ಯ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಕಲ್ಲು ಕಟ್ಟಡ) ಪ್ರಾಂಶುಪಾಲ ಎಚ್.ಪಿ.ತಮ್ಮೇಗೌಡ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net