

ಮೈಸೂರು: ದೇಶದ ಪ್ರತಿ ಪ್ರಜೆ ಸಂವಿಧಾನ ಅರಿಯುವ ಪ್ರಯತ್ನ ಮಾಡಬೇಕು ಎಂದು ಕುವೆಂಪುನಗರದ ಜೆಎಸ್‌ಎಸ್ ಕಾನೂನು ಕಾಲೇಜು ಪ್ರಾಂಶುಪಾಲ ಎಸ್. ನಟರಾಜ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರದ ವತಿಯಿಂದ ನಗರದ ಯುವರಾಜ ಕಾಲೇಜಿನಲ್ಲಿ ಮಂಗಳವಾರ ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾ ಡಿದರು.
ಭಾರತದ ಸಂವಿಧಾನ ವಿಶ್ವದಲ್ಲೇ ಭಿನ್ನವಾದ ಸಂವಿಧಾನ. ಭಾರತ ವೈವಿಧ್ಯತೆಯಿಂದ ಕೂಡಿದ ರಾಷ್ಟ್ರ. ಇಂತಹ ರಾಷ್ಟ್ರಕ್ಕೆ ಸಂವಿಧಾನ ರಚಿಸುವುದು ಸುಲಭದ ಮಾತಲ್ಲ. ಹಾಗಾಗಿ ಇದೊಂದು ವಿಶಿಷ್ಟವಾದ ಸಂವಿಧಾನ ಎಂದು ವಿಶ್ವದ ಹಲವು ವಿದ್ವಾಂಸರು ಬಣ್ಣಿಸಿದ್ದಾರೆ ಎಂದು ಹೇಳಿದರು.
ನಮ್ಮನ್ನು ಆಳುತ್ತಿರುವುದು ಸಂವಿಧಾನವೇ ಹೊರತು ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಅಲ್ಲ. ದೇಶದಲ್ಲಿ ಎಲ್ಲ ಚಟುವಟಿಕೆಗಳು ಸಂವಿಧಾನದ ಅಡಿಯಲ್ಲಿ ನಡೆಯುತ್ತದೆ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಸಂವಿಧಾನ ಅಡಿಯಲ್ಲಿ ನಡೆಯುತ್ತದೆ. ಸಂವಿಧಾನಕ್ಕಿಂತ ಯಾರು ದೊಡ್ಡವರಲ್ಲ, ಎಲ್ಲರು ಸಂವಿಧಾನ ಅಡಿಯಲ್ಲಿ ನಡೆಯಬೇಕು. ಇಂಗ್ಲೆಂಡ್‌ನಲ್ಲಿ ಸಂವಿಧಾನಕ್ಕಿಂತ ಸಂಸತ್ ದೊಡ್ಡದು. ಆದರೆ, ಭಾರತದಲ್ಲಿ ಸಂವಿಧಾನವೇ ಸುಪ್ರೀಂ ಎಂದರು.
ಸಂವಿಧಾನ ರಚಿಸುವ ಸಂದರ್ಭದಲ್ಲಿ ಹಲವಾರು ಸಮಸ್ಯೆ ಸವಾಲುಗಳು ಎದುರಾಯಿತು. ಸಂವಿಧಾನ ರಚನೆ ಸಂದರ್ಭ ದೇಶದಲ್ಲಿ ರಾಜಮಹಾರಾಜರ ಆಡಳಿತ ಇತ್ತು. ಭಿನ್ನವಾದ ಸಂಸ್ಕೃತಿ, ಭಾಷೆಯನ್ನು ಒಳಗೊಂಡ ಜನರಿಗೆ ಸರಿಹೊಂದುವ ಸಂವಿಧಾನ ರಚಿಸುವುದು ಸವಾಲಾಗಿತ್ತು. ಆದರೆ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಆ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಇಂದು ಸಂವಿಧಾನ ಸಮಾಜ ಪರಿವರ್ತನೆಯ ಸಾಧನವಾಗಿದೆ ಎಂದು ಹೆಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ಕೇಂದ್ರದ ಪ್ರಾಧ್ಯಾಪಕ ಪ್ರೊ. ನರೇಂದ್ರ ಕುಮಾರ್,ಯುವರಾಜ ಕಾಲೇಜು ಪ್ರಾಂಶುಪಾಲ ದೇವರಾಜೇಗೌಡ, ಆಡಳಿತಾಧಿಕಾರಿ ಎಂ.ಕೆ. ಮಹೇಶ್, ಕಂಟ್ರೋಲರ್ ಅಜಯ್ ಕುಮಾರ್, ಮೈಸೂರು ವಿವಿ ಸಂಜೆ ಕಾಲೇಜು ಪ್ರಾಂಶುಪಾಲ ಪ್ರೊ.ಮಹದೇವಮೂರ್ತಿ ಹಾಗೂ ಇತರರು ಇದ್ದರು.