ಸಂವಿಧಾನ ಆಶಯಗಳನ್ನು ಪಾಲಿಸೋಣ

samvidana dina
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ಸಂವಿಧಾನ ಪೀಠಿಕೆಗೆ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಿ ಮಾತನಾಡಿದ ಜಿಲ್ಲಾಧಿಕಾರಿ ಅವರು, ನಮ್ಮ ಸಂವಿಧಾನ ವಿಶ್ವದಲ್ಲೇ ದೊಡ್ಡ ಲಿಖಿತ ಸಂವಿಧಾನ. ಇದರ ಆಶಯವನ್ನು ತಿಳಿದು ಮೂಲಭೂತ ಹಕ್ಕು ಪಡೆದು, ಕರ್ತವ್ಯಗಳನ್ನು ಪ್ರತಿ ಭಾರತೀಯರು ಪಾಲನೆ ಮಾಡಬೇಕಿದೆ ಎಂದು ಹೇಳಿದರು. ಸಂವಿಧಾನ ಎಲ್ಲ ವರ್ಗದ ಜನರಿಗೆ ಸಮಾನತೆಯನ್ನು ಒದಗಿಸುವ ಜತೆಗೆ ತಾರತಮ್ಯ ತೊಡೆದುಹಾಕಲು ನೂರಾರು ಕಾನೂನುಗಳನ್ನು ರೂಪಿಸಿದ ಬೃಹತ್ ಮಾದರಿ ಸಂವಿಧಾನವಾಗಿ ನಿಂತಿದೆ ಎಂದರು.

ವಿಶ್ವದಲ್ಲೆ ದೊಡ್ಡ ಸಂವಿಧಾನ: ಸಂವಿಧಾನ ಜಾರಿಗೆ ಬಂದಾಗಿನಿಂದ ನಮ್ಮ ದೇಶದಲ್ಲಿ ಹೊಸ ಶಕೆ ಆರಂಭವಾಯಿತು ಎನ್ನಬಹುದು. ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವುದರ ಜತೆಗೆ ಅವರ ಸಾಧನೆಯ ಬಗ್ಗೆ ತಿಳಿಸಿ ಕೊಡುವುದು ಈ ದಿನದ ವಿಶೇಷತೆಯಾಗಿದೆ ಎಂದರು. ಭಾರತದ ಸಂವಿಧಾನಕ್ಕೆ ವಿಶ್ವದಲ್ಲೇ ದೊಡ್ಡ ಸಂವಿಧಾನ ಎಂಬ ಹಿರಿಮೆ ಇದೆ. ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆಯೊದಗಿಸಿದೆ. ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ. ನಮ್ಮ ಸಂವಿಧಾನವು ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು ಎಂದರು.

ಸಂವಿಧಾನದ ಕೊಡುಗೆ: ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿ ಡಾ.ಬಿ.ಆರ್.ಅಂಬೇಡ್ಕರ್ ಹತ್ತಾರು ದೇಶ ಸುತ್ತಿ ಅಲ್ಲಿನ ಕಾನೂನಿನ ಸಮಗ್ರ ಅಧ್ಯಯನ ಮಾಡಿ, ಅನ್ಯದೇಶಗಳು ಮೆಚ್ಚಿಕೊಳ್ಳುವಂತ ಭಾರತೀಯ ಸಂವಿಧಾನದ ಕೊಡುಗೆ ನೀಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ತಿಳಿಸಿದರು. ನಾವು ನ.26 ಅನ್ನು ಸಂವಿಧಾನ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಇದು ವರ್ಷಗಳ ಸ್ಥಿರತೆ, ಶಕ್ತಿ ಮತ್ತು ಸಾಮರ್ಥ್ಯದ ಫಲಿತಾಂಶವಾಗಿದೆ. ಪ್ರಸ್ತುತ, ಭಾರತೀಯ ಸಂವಿಧಾನದ ವೈಭವ, ಅದರ ರಚನೆ ಮತ್ತು ಐತಿಹಾಸಿಕ ಪಯಣವನ್ನು ಬಿಂಬಿಸುವ ಈ ದಿನ ಮಹತ್ವದ್ದಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net