

ಕೊಳ್ಳೇಗಾಲ: ಪ್ರತಿಯೊಬ್ಬರಿಗೂ ಸ್ವಾವಲಂಬಿ, ಸಮಾನತೆಯ ಜೀವನ ನೀಡಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ಮಂಗಳವಾರ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಸಂಸದ ಸುನೀಲ್ ಬೋಸ್ ಅವರಿಗೆ ಸನ್ಮಾನ ಮತ್ತು ಪ್ರಸ್ತುತ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ಥಿತಿಗತಿಗಳು ಕುರಿತ ವಿಚಾರಸಂಕಿರಣ ಸಮಾರಂಭದಲ್ಲಿ ಮಾತನಾಡಿದರು.
ಸಂವಿಧಾನದಡಿ ಶಿಕ್ಷಣ ವ್ಯವಸ್ಥೆ ಸಾರ್ವಜನಿಕವಾಗಿದೆ. ಅಧಿಕಾರ ಹಾಗೂ ಉದ್ಯೋಗ ದೊರೆತಿದೆ. ಭಾರತ ಸಂವಿಧಾನ ದೇಶದ ಎಲ್ಲ ಜನರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದೆ. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ವ್ಯವಸ್ಥೆ ಇದೆ. ತಪ್ಪು ಮಾಡಿದವರಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಶಿಕ್ಷೆ ನೀಡಲಾಗುತ್ತಿದೆ. ಆದರೂ, ದ್ವೇಷ, ಗಲಾಟೆ, ಅತ್ಯಾಚಾರ, ದೌರ್ಜನ್ಯ ನಿಂತಿಲ್ಲ. ಕೇಂದ್ರದಲ್ಲಿ ಬಹುಮತ ಬಂದರೆ ಸಾಕು ವಿರೋಧ ಇದ್ದರೂ ಬಿಲ್ ಪಾಸ್ ಮಾಡಲಾಗುತ್ತಿದೆ. ಕಾರ್ಯಾಂಗವೂ ಸರ್ಕಾರ ಹೇಳಿದಂತೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ರಾಜ್ಯ ಮಹಿಳಾ ಕಾಂಗ್ರೆಸ್ ಘಟಕ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರವು ಸಂವಿಧಾನ ಜಾಗೃತಿ ವಿಶೇಷ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿತ್ತು. ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವ ವಿನೂತನ ಕಾರ್ಯಕ್ರಮ ನಡೆಸಿತು. ಅಂಬೇಡ್ಕರ್ ಅವರು ಮಹಿಳಾ ಸ್ವಾತಂತ್ರ್ಯ ಹಾಗೂ ಸಮಾನತೆಗೆ ದಿಟ್ಟ ಹೋರಾಟ ಮಾಡಿದವರು. ನಾನೊಬ್ಬ ಮಹಿಳೆ ಶಾಸಕಿಯಾಗಲು ಸಂವಿಧಾನ ಕಾರಣ. ಎಲ್ಲ ಧರ್ಮ, ಜಾತಿ, ವರ್ಗದ ಜನರನ್ನು ಕಾಪಾಡುವುದೇ ಸಂವಿಧಾನ ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತೆ ಪ್ರೇಮಲತಾ ಕೃಷ್ಣಸ್ವಾಮಿ, ಕಾರ್ಯಕ್ರಮ ಆಯೋಜಕರಾದ ರಾಜಶೇಖರ್ ಮೂರ್ತಿ, ಮಾಂಬಳ್ಳಿ ಮುಜ್ಜು ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಬೆಂಗಳೂರಿನ ಖ್ಯಾತ ವಕೀಲ ಎಚ್.ಮೋಹನ್‌ಕುಮಾರ್, ವಿಚಾರವಾದಿ ಬಿ.ಕೇಶವ ಮೂರ್ತಿ ಸಂವಿಧಾನ ಬಗ್ಗೆ ಉಪನ್ಯಾಸ ನೀಡಿದರು.
ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಕಾಡಾ ನಿಗಮ ಅಧ್ಯಕ್ಷ ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಜಿ.ಪಂ ಮಾಜಿ ಸದಸ್ಯ ಎ.ಆರ್.ಬಾಲರಾಜು, ನಗರಸಭೆ ಅಧ್ಯಕ್ಷ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಪ್ರೇಮಲತಾ ಕೃಷ್ಣಸ್ವಾಮಿ, ಮುಖಂಡ ಅನ್ಸರ್ ಬೇಗ್, ಜಿ.ಎನ್.ಲೋಕೇಶ್, ಸ್ವಾಮಿ ನಂಜಪ್ಪ, ಶಿವಮಲ್ಲು, ದೇವಾನಂದ್, ಮನ್ಸೂರ್ ಪಾಷ ಇದ್ದರು.