

ಮಂಗಳೂರು : ದೇಶದಲ್ಲಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರು ಮುಖ್ಯವಾಹಿನಿಗೆ ಬರಲು ಭಾರತದ ಸಂವಿಧಾನ ಮಹತ್ವದ ಕೊಡುಗೆ ನೀಡಿದೆ. ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದ್ದು, ಸಂವಿಧಾನವನ್ನು ಪೂರ್ತಿ ಬಳಸುವಲ್ಲಿ ನಾವು ವಿಲರಾಗಿದ್ದೇವೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ನಗರದ ಪುರಭವನದಲ್ಲಿ ಶನಿವಾರ ‘ಭಾರತ ಸಂವಿಧಾನ-ಅಮೃತೋತ್ಸವ 75ರ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ
ಅವರು ಸಂವಿಧಾನ ರಚನಾ ಸಭೆಯಲ್ಲಿ ಕರಾವಳಿಯ ಐವರು ಭಾಗವಹಿಸಿದ್ದರು ಎಂಬುದು ಹೆಮ್ಮೆಯ ಸಂಗತಿ. ಈ ಐವರ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು ಎಂದರು.
ಮುಖ್ಯ ಅತಿಥಿಯಾಗಿದ್ದ ಕರ್ಣಾಟಕ ಬ್ಯಾಂಕ್ ವಿಶ್ರಾಂತ ಎಂಡಿ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್. ಮಾತನಾಡಿ, ಭಾರತದ ಸಂವಿಧಾನ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಅವಕಾಶಗಳನ್ನು ನೀಡಿದೆ. ಸಂವಿಧಾನದ ಬಗ್ಗೆ ಡಾ.ಪಿ. ಅನಂತಕೃಷ್ಣ ಭಟ್ ಅವರು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಭಾರತದ ಸಂವಿಧಾನದ ಬಗ್ಗೆ ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕ ಡಾ.ಪಿ. ಅನಂತಕೃಷ್ಣ ಭಟ್, ಭಾರತದ ಸಂವಿಧಾನದ ಅಮೃತ ಮಹೋತ್ಸವ ಅಂಗವಾಗಿ ವರ್ಷಪೂರ್ತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾರತದ ಸಂವಿಧಾನ ಪುಸ್ತಕವನ್ನು ಕನ್ನಡ ಮಾಧ್ಯಮ ಶಾಲೆ ಮಕ್ಕಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಭಾರತದ ಸಂವಿಧಾನ ಪ್ರಪಂಚದಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ. ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದರು.
ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಯಣ್ಣ ಸಿ.ಡಿ. ಉಪಸ್ಥಿತರಿದ್ದರು. ಇದೇ ಸಂದರ್ಭ ಸಂವಿಧಾನ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು. ಸಭಾ ಕಾರ್ಯಕ್ರಮಕ್ಕೆ ಮುನ್ನ ಈಶಾನ್ಯ ಭಾರತ ಹಾಗೂ ಕರ್ನಾಟಕದ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಉಪನ್ಯಾಸಕ ಶಿವಪ್ರಕಾಶ್ ವಂದಿಸಿದರು. ನಂದಿತಾ ಕಾರ್ಯಕ್ರಮ ನಿರೂಪಿಸಿದರು.