

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಜತೆಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಪ್ರತ್ಯೇಕವಾಗಿ ಸಂವಿಧಾನ ಜಾಗೃತಿ ಜಾಥಾ ನಡೆಸಲಾಗುವುದು. ಇದಕ್ಕೆ ಹು-ಧಾ ಮಹಾನಗರ ಪಾಲಿಕೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚಿಸಿದರು.
ಇಲ್ಲಿಯ ಪಾಲಿಕೆ ಆಯುಕ್ತರ ಕಚೇರಿ ಸಭಾಭವನದಲ್ಲಿ ಪಾಲಿಕೆ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಗುರುವಾರ ಸಂಜೆ ಸಭೆ ನಡೆಸಿದ ಅವರು, ಜ. 26ರಂದು ಗಣರಾಜ್ಯೋತ್ಸವ ದಿನದಂದು ಧಾರವಾಡದಲ್ಲಿ ಜಿಲ್ಲಾ ಮಟ್ಟದ ಜಾಥಾ ಚಾಲನೆ ಪಡೆಯಲಿದೆ. ಒಂದೆರಡು ದಿನಗಳಲ್ಲಿ ಹು-ಧಾ ಅವಳಿ ನಗರದಲ್ಲಿ ಜಾಥಾಕ್ಕೆ ಚಾಲನೆ ನೀಡಲಾಗುವುದು ಎಂದರು.
ಈ ಜಾಥಾ ಫೆಬ್ರುವರಿ 23ರವರೆಗೆ ಎಲ್ಲ 82 ವಾರ್ಡ್ಗಳಲ್ಲಿ ಸಂಚರಿಸಲಿದೆ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಹಾಗೂ ಸಂವಿಧಾನವನ್ನು ಪ್ರತಿನಿಧಿಸುವ ಸ್ತಬ್ಧ ಚಿತ್ರ ಮತ್ತು ಎಲ್ಇಡಿ ಪರದೆ ಜಾಥಾದಲ್ಲಿ ಇರಲಿದೆ. ನಿತ್ಯ ಬೆಳಗ್ಗೆಯಿಂದ ಸಂಜೆಯವರೆಗೆ 3-4 ವಾರ್ಡ್ಗಳಲ್ಲಿ ಜಾಥಾ ಸಂಚರಿಸಲಿದೆ. ಪ್ರತಿ ಸಂಜೆ ಒಂದು ನಿರ್ದಿಷ್ಟ ಸ್ಥಳದಲ್ಲಿ ವೇದಿಕೆ ಕಾರ್ಯಕ್ರಮ ನಡೆಸಲಾಗುವುದು. ಫೆ. 25ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಹೇಳಿದರು.
ಅಂಬೇಡ್ಕರ್, ಬುದ್ಧ, ಬಸವೇಶ್ವರರ ಸಂದೇಶವನ್ನೊಳಗೊಂಡ ಗೋಡೆ ಬರಹ, ಹೋರ್ಡಿಂಗ್ ಹಾಕಿಸಬೇಕು. ಆಯಾ ವಾರ್ಡ್ನ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಸಂಜೆ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಆಶಾ ಕಾರ್ಯಕರ್ತೆಯರನ್ನು ತೊಡಗಿಸಿಕೊಳ್ಳಬೇಕು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಕರೆತರಬೇಕು. ಮಠಾಧೀಶರು, ಎಲ್ಲ ಧರ್ಮಗಳ ಧರ್ಮಗುರುಗಳನ್ನು, ಗಣ್ಯರು, ಸಾಧಕರನ್ನು ಆಹ್ವಾನಿಸಬೇಕು ಎಂದು ಸೂಚಿಸಿದರು.
ಪ್ರೇಮನಾಥ ಚಿಕ್ಕತುಂಬಳ, ಶಂಕರ ಅಜಮನಿ, ಗುರುನಾಥ ಉಳ್ಳಿಕಾಶಿ, ಇನ್ನಿತರ ಸಲಹೆ ನೀಡಿದರು. ಮೇಯರ್ ವೀಣಾ ಬರದ್ವಾಡ, ಉಪ ಮೇಯರ್ ಸತೀಶ ಹಾನಗಲ್, ಪಾಲಿಕೆ ವಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟ್ಲ, ಸದಸ್ಯರಾದ ದೋರಾಜ ಮಣಿಕುಂಟ್ಲ, ಇಮ್ರಾನ್ ಎಲಿಗಾರ, ಇಕ್ಬಾಲ ನವಲೂರ, ಜಿಪಂ ಸಿಇಒ ಸ್ವರೂಪಾ ಟಿ.ಕೆ., ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಹೆಚ್ಚುವರಿ ಆಯುಕ್ತ ಚಿದಾನಂದ ಗುರುಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ಆಯುಕ್ತ ಅಲ್ಲಾಭಕ್ಷ, ಇತರರು ಇದ್ದರು.