

ಮೈಸೂರು: ಭಾರತ ಸಂವಿಧಾನ ಅಂಗೀಕೃತಗೊಂಡ 75 ವರ್ಷಗಳ ಅಮೃತ ಮಹೋತ್ಸವದ ಸವಿನೆನಪಿಗಾಗಿ ಜಿಲ್ಲಾದ್ಯಂತ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ನಗರದ ಡಾ.ಬಾಬು ಜಗಜೀವನರಾಮ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿರ್ದೇಶನದಂತೆ ಸಂವಿಧಾನ ಹಾಗೂ ಸಂವಿಧಾನ ಪೀಠಿಕೆಯ ಆಶೋತ್ತರಗಳನ್ನು ಜನಮಾನಸಕ್ಕೆ ಮುಟ್ಟಿಸುವ ಹಿನ್ನೆಲೆಯಲ್ಲಿ ಜಾಥಾ ಕಾರ್ಯಕ್ರಮ ಆಯೋಜಿಸಲಾಗಿದೆ. ಜ.26ರಂದು ಜಿಲ್ಲಾ ಕೇಂದ್ರದಿಂದ ಆರಂಭವಾಗುವ ಜಾಥಾ ಫೆಬ್ರವರಿ 23ಕ್ಕೆ ಜಿಲ್ಲೆಯಲ್ಲಿ ಮುಕ್ತಾಯಗೊಂಡು ಬೆಂಗಳೂರು ತಲುಪಲಿದೆ ಎಂದರು.
2 ಟ್ಯಾಬ್ಲೋ ವಾಹನಗಳು ಮೈಸೂರು ಮತ್ತು ಹುಣಸೂರು ಉಪವಿಭಾಗಗಳಲ್ಲಿ ಸಂಚರಿಸಲಿವೆ. ಜಿಲ್ಲೆಯ 256 ಗ್ರಾಮ ಪಂಚಾಯಿತಿ, 14 ಸ್ಥಳೀಯ ಸಂಸ್ಥೆಗಳು ಹಾಗೂ 1 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳು ಅಂಬೇಡ್ಕರ್ ಆಶಯಗಳೊಂದಿಗೆ ಸಾಮಾಜಿಕ ನ್ಯಾಯ, ಸೌಹಾರ್ದ, ಭಾತೃತ್ವ ಹಾಗೂ ಸಮಾನತೆಯ ಸಂದೇಶವನ್ನು ಎಲ್ಲ ವರ್ಗದ ಮನೆ-ಮನಗಳಿಗೆ ಕೊಂಡೊಯ್ಯುವ ಮೂಲಕ ಸಮಸಮಾಜದ ನಿರ್ಮಾಣಕ್ಕೆ ಇಂಬು ಕೊಡಲಿವೆ ಎಂದು ಹೇಳಿದರು.
ಜಿಲ್ಲಾದ್ಯಂತ ಸಂಚರಿಸುವ ಜಾಥಾದಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಇರಲಿದ್ದು, ಮುಖ್ಯ ಗ್ರಾಮ, ಪಂಚಾಯಿತಿ ಕೇಂದ್ರ, ಹೋಬಳಿ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಚಿಂತಕರು, ಸಾಹಿತಿಗಳು, ವಾಗ್ಮಿಗಳು ಹಾಗೂ ಅಂಬೇಡ್ಕರ್ ಬಗ್ಗೆ ಅಧ್ಯಯನ ಮಾಡಿರುವವರಿಂದ ಭಾಷಣ ಏರ್ಪಡಿಸಲಾಗಿರುತ್ತದೆ ಎಂದರು.
ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಿಗೆ ಚಿತ್ರ ರಚನೆ, ಪ್ರಬಂಧ ಸ್ಪರ್ಧೆ ಮುಂತಾದವುಗಳನ್ನು ಜಾಥಾ ಬರುವ ಹಿಂದಿನ ದಿನವೇ ಆಯೋಜಿಸಿ ಕಾರ್ಯಕ್ರಮ ದಿನದಂದು ಬಹುಮಾನ ನೀಡುವ ಮೂಲಕ ಉತ್ತೇಜಿಸಿ, ಮೊದಲ ಸ್ಥಾನ ಪಡೆದವರನ್ನು ಜಿಲ್ಲಾ ಹಂತಕ್ಕೆ ಕಳುಹಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಾಥಾ ಪ್ರವೇಶಿಸುವ ಮಾರ್ಗದ ಗ್ರಾಮಗಳ ಎಲ್ಲ ಮನೆಗಳಿಗೂ ಸಂವಿಧಾನ ಪೀಠಿಕೆಯ ಕಾರ್ಡ್‌ಗಳನ್ನು ನೀಡುವ ಮೂಲಕ ಸಂವಿಧಾನ ಪೀಠಿಕೆ ಎಲ್ಲರನ್ನೂ ತಲುಪುವಂತೆ ಪ್ರಯತ್ನಿಸಬೇಕು ಎಂದರು. ಬಾಬಾ ಸಾಹೇಬರ ಅಪರೂಪದ ಚಿತ್ರಗಳು, ವಿಡಿಯೋ ತುಣುಕುಗಳು, ಸಂವಿಧಾನ ರಚನಾ ಸಭೆಯಲ್ಲಿ ನಡೆಸಿರುವ ಚರ್ಚೆಗಳ ವಿಡಿಯೋಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವರು ಪ್ರತಿನಿಧಿಸುವ ಜಿಲ್ಲೆ ನಮ್ಮದಾಗಿರುವುದರಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ರಾಜ್ಯ ಮಟ್ಟದಲ್ಲಿ ಬಹುಮಾನ ಬರುವಂತೆ ಕಾರ್ಯಕ್ರಮ ನಡೆಸಲು ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಸಹಕಾರ ನೀಡಬೇಕು ಎಂದು ಕೋರಿದರು.
ಜಿ.ಪಂ. ಸಿಇಒ ಕೆ.ಎಂ.ಗಾಯತ್ರಿ, ಮುಡಾ ಆಯುಕ್ತ ದಿನೇಶ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಜಂಟಿ ನಿರ್ದೇಶಕ ಚಂದ್ರಶೇಖರ್, ಪ್ರೊ.ಬಸವರಾಜ ದೇವನೂರು, ಪ್ರೊ.ನರೇಂದ್ರಕುಮಾರ್, ಪ್ರೊ ಜೆನ್ನಿ, ಮುಖಂಡರಾದ ಸೋಮಣ್ಣ, ಜವರಯ್ಯ ಮುಂತಾದವರಿದ್ದರು.