

ಹುಬ್ಬಳ್ಳಿ : ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಯು ಗುರುವಾರದಂದು ಕುಂದಗೋಳ ತಾಲೂಕಿನ ಗುಡಗೇರಿ, ಗೌಡಗೇರಿ, ಕಳಸ, ಪಶುಪತಿಹಾಳ ಗ್ರಾಮಕ್ಕೆ ಆಗಮಿಸಿದಾಗ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಸವಣ್ಣನವರ ವೇಷಭೂಷಣ ಧರಿಸಿದ ಚಿಣ್ಣರು, ಸಂವಿಧಾನ ಜಾಗೃತಿ ಜಾಥಾವನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ವೇಷಭೂಷಣವನ್ನು ಹಲವು ಮಕ್ಕಳು ಧರಿಸಿದ್ದು ವಿಶೇಷವಾಗಿತ್ತು. ಒಬ್ಬರಿಗಿಂತ ಒಬ್ಬರು ಮುದ್ದಾಗಿ ಕಾಣಿಸುತ್ತಿದ್ದರು. ಅಲ್ಲದೇ ಬಸವೇಶ್ವರರ ವೇಷಭೂಷಣವನ್ನು ಧರಿಸಿದ ಮಕ್ಕಳು ನೋಡುಗರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದರು, ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ಛತ್ರಪತಿ ಶಿವಾಜಿ ಮಹಾರಾಜರು ಸೇರಿದಂತೆ ವಿವಿಧ ಮಹಾನ್ ನಾಯಕರ ವೇಷ ಧರಿಸಿದ ಮಕ್ಕಳು ಗಮನ ಸೆಳೆದರು.
ಮಹಿಳೆಯರ ಡೊಳ್ಳು ಕುಣಿತ, ಮುತೆôದೆಯರ ಕುಂಭಮೇಳ, ಸೇವಾದಳ, ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಅದ್ದೂರಿಯಾಗಿ ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿತು. ನಮ್ಮ ಸಂವಿಧಾನ ನಮ್ಮ ಹೆಮ್ಮೆ, ನಮ್ಮ ಸಂವಿಧಾನ ನಮ್ಮ ಶಕ್ತಿ, ನಮ್ಮ ಸಂವಿಧಾನ ನಮ್ಮ ಅಭಿವೃದ್ಧಿ, ನಮ್ಮ ಸಂವಿಧಾನ ನಮ್ಮ ಪ್ರತಿಷ್ಠೆ, ಅಂಬೇಡ್ಕರ್, ಬಸವಣ್ಣನವರು, ಕಿತ್ತೂರು ರಾಣಿ ಚನ್ನಮ್ಮ ಕುರಿತಾದ ಜಯಘೊಷಗಳನ್ನು ಸಾರ್ವಜನಿಕರು ಕೂಗಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆಯು ಸಾರ್ವಜನಿಕರ ಗಮನ ಸೆಳೆಯಿತು. ಶಾಲಾ ವಿದ್ಯಾರ್ಥಿಗಳು ನೃತ್ಯ ಮಾಡಿ, ಹಾಡುಗಳನ್ನು ಹಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮೀನಾಕ್ಷಿ ಗುದಗಿಯವರ ಅವರು ಸಂವಿಧಾನ ಪತ್ರಿಜ್ಞಾ ವಿಧಿಯನ್ನು ಬೋಧಿಸಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಭಾರತಿ ಮೆಣಸಿನಕಾಯಿ, ಗುಡಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದ್ರಾಕ್ಷಾಯಣಿ ಶಿರೂರ, ಉಪಾಧ್ಯಕ್ಷೆ ನಿರ್ಮಲಾ ಬೂದಿಹಾಳ, ಗ್ರಾಪಂ ಅಭಿವೃದ್ದಿ ಅಧಿಕಾರಿ ಬಿ.ಎನ್. ರಾಘವೇಂದ್ರ, ಪಶುಪತಿಹಾಳ ಗ್ರಾಪಂ ಅಧ್ಯಕ್ಷಕ್ಷೆ ಶೀಲಾ ಕಾಳಿ, ಉಪಾಧ್ಯಕ್ಷೆ ಸುನಂದಾ ಮಾನೇದ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮುಖಂಡರು, ಶಿಶು ಅಭಿವೃದ್ದಿ ಅಧಿಕಾರಿಗಳು, ವಿದ್ಯಾರ್ಥಿಗಳು, ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.