ಸಂವಿಧಾನ ಜಾಗೃತಿ ಜಾಥಾವನ್ನು ಹಬ್ಬದಂತೆ ಸ್ವಾಗತಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

Constitution Awareness Jatha pre-meeting mandya
Published on

ಮಂಡ್ಯ: ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜ.26ರಿಂದ ಫೆ.23ರವರೆಗೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಂವಿಧಾನ ಜಾಗೃತಿ ಜಾಥ ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ ಶಾಲಾ, ಕಾಲೇಜು ಸೇರಿದಂತೆ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಜಾಥಾ ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಮನವಿ ಮಾಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂವಿಧಾನದ ಮಹತ್ವ ಹಾಗೂ ಮೌಲ್ಯದ ಕುರಿತು ಅರಿವು ಮೂಡಿಸುವುದು. ದೇಶದ ಜನತೆಗೆ ಸಂವಿಧಾನ ನೀಡಿರುವ ಹಕ್ಕುಗಳು ಕುರಿತಂತೆ ಅರಿವು ಮೂಡಿಸಲು ಹಾಗೂ ರಾಷ್ಟ್ರೀಯ ಏಕತೆಯನ್ನು ಎತ್ತಿಹಿಡಿಯುವುದು ಜಾಥದ ಉದ್ದೇಶವಾಗಿದೆ ಎಂದರು.

ಸಂವಿಧಾನದ ಮೌಲ್ಯ ಮತ್ತು ಆಶಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಆದ್ಯ ಕರ್ತವ್ಯವಾಗಿದೆ. ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರವು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಲಿದೆ. 26ರಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಆದ್ದರಿಂದ 233 ಗ್ರಾಪಂನಲ್ಲಿಯೂ ಜಾಥಾವನ್ನು ಬರ ಮಾಡಿಕೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಂವಿಧಾನದ ಪೀಠಿಕೆಯನ್ನು ಎಲ್.ಇ.ಡಿ ಪ್ರದರ್ಶನ ಮಾಡಲಾಗುವುದು. ಗ್ರಾಮ ಪಂಚಾಯಿತಿಗೆ ಯಾವ ದಿನ ಸಂವಿಧಾನ ಜಾಥಾ ಮೆರವಣಿಗೆ ಬರಲಿದೆ ಎಂಬುದನ್ನು ವೆಬ್ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಅದರಂತೆ ಎಲ್ಲರೂ ಭಾಗವಹಿಸಿ ವಿಜೃಂಭಣೆಯಿಂದ ಜಾಥಾವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕು. ವಿಜೇತರಾದವರಿಗೆ ಜಾಗೃತಿ ಜಥಾ ತಮ್ಮ ವ್ಯಾಪ್ತಿಗೆ ಬಂದಾಗ ಕಾರ್ಯಕ್ರಮ ಆಯೋಜಿಸಿ ಬಹುಮಾನ ವಿತರಿಸಬೇಕು. ಜಾಥವು ಫೆ.25ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಂವಿಧಾನ ಜಾಗೃತಿ ಸಮಾವೇಶ ತಲುಪಲಿದೆ ಎಂದರು.

ಜಾಥಾ ನಡೆಯುವ ವೇಳೆ ವಿವಿಧ ಕಲಾತಂಡಗಳ ಮೆರಗು ಇರಲಿ. ಗ್ರಾಪಂ ವ್ಯಾಪ್ತಿಯಲ್ಲಿ ಸಂಚರಿಸಲಿರುವ ಜಾಥಾ ಸ್ಥಳೀಯರ ಮನವಿ ಮೇರೆಗೆ ಪ್ರತಿ ಹಳ್ಳಿಗಳಿಗೂ ಸಂಚರಿಸಲಿ. ಜತೆಗೆ ಸ್ತಬ್ಧಚಿತ್ರದಲ್ಲಿ ಸಂವಿಧಾನ ಕುರಿತ ಪುಸ್ತಕಗಳ ಪ್ರದರ್ಶನವಿರಲಿ ಎಂದು ವಿವಿಧ ಸಂಘ ಸಂಸ್ಥೆಗಳ ಮುಖಂಡರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಜಾಗೃತಿ ಜಾಥಾ ತಮ್ಮ ವ್ಯಾಪ್ತಿಗೆ ಬಂದಾಗ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ಸೇರಿ ಹಬ್ಬದ ವಾತಾವರಣ ಸೃಷ್ಠಿಸಿ ಬರಮಾಡಿಕೊಳ್ಳಿ ಎಂದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿದ್ದಲಿಂಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net