

ಎನ್.ಆರ್.ಪುರ: ಪಟ್ಟಣಕ್ಕೆ ಫೆ.8ರ ಸಂಜೆ ಸಂವಿಧಾನ ಜಾಗೃತಿ ಜಾಥಾ ಆಗಮಿಸಲಿದ್ದು, 9ರ ಬೆಳಗ್ಗೆ ಪ್ರವಾಸಿ ಮಂದಿರದಿಂದ ಮಿನಿ ವಿಧಾನ ಸೌಧದವರೆಗೆ ಅದ್ದೂರಿ ಮೆರವಣಿಗೆ ನಡೆಸಲು ಪಪಂ ಸಭೆ ತೀರ್ಮಾನಿಸಿತು.
ಪಪಂನಲ್ಲಿ ಗುರುವಾರ ತಹಸೀಲ್ದಾರ್ ತನುಜಾ ಟಿ. ಸವದತ್ತಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ, ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು.
ಪ್ರವಾಸಿ ಮಂದಿರದಲ್ಲಿ ಆರಂಭವಾಗುವ ಮೆರವಣಿಗೆಯಲ್ಲಿ ಸೇಂಟ್ ಜಾರ್ಜ್ ಶಾಲೆ, ಸರ್ಕಾರಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳೊಂದಿಗೆ ಹಾಗೂ ಪಟ್ಟಣ ವ್ಯಾಪ್ತಿಯ ಎಲ್ಲ ಶಾಲಾ ಕಾಲೇಜು ಮಕ್ಕಳೊಂದಿಗೆ, ಸ್ವಸಹಾಯ ಸಂಘದ ಸದಸ್ಯರು ಪೂರ್ಣಕುಂಭ ಸ್ವಾಗತದೊಂದಿಗೆ ಅದ್ದೂರಿ ಮೆರವಣಿಗೆ ನಡೆಸಲು ನಿರ್ಧರಿಸಲಾಯಿತು.
ಪ್ರಮುಖ ವೃತ್ತಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಿ ಸಂವಿಧಾನ ಜಾಗೃತಿ ಜಾಥಾ ಆಗಮಿಸುತ್ತಿರುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಧ್ವನಿವರ್ಧಕದ ಮೂಲಕ ಎಲ್ಲ ಕಡೆ ವ್ಯಾಪಕ ಪ್ರಚಾರ ಮಾಡುವಂತೆ ಸಲಹೆ ನೀಡಲಾಯಿತು.
ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಹಾಕಿರುವ ಶ್ರದ್ಧಾಂಜಲಿ ಸಲ್ಲಿಕೆ ಬ್ಯಾನರ್ ತೆರವುಗೊಳಿಸಬೇಕು. ಯಾವುದೇ ಬಾವುಟ, ಬ್ಯಾನರ್‌ಗಳನ್ನು ಕಟ್ಟದಂತೆ ಸೂಚಿಸಲಾಯಿತು.
ಬಸ್ತಿಮಠದ ಲಕ್ಷ್ಮೀಸೇನಾಭಟ್ಟಾರಕ ಸ್ವಾಮೀಜಿ, ವಿವಿಧ ಚರ್ಚ್‌ಗಳ ಧರ್ಮಗುರುಗಳು, ಎಲ್ಲ ಧರ್ಮಗಳ ಮುಖಂಡರು ಜಾಥಾದಲ್ಲಿ ಭಾಗವಹಿಸಲು ಆಹ್ವಾನಿಸುವಂತೆ ಆ ಭಾಗದ ಪಪಂ ಸದಸ್ಯರಿಗೆ ತಿಳಿಸಲಾಯಿತು. ಸ್ವಸಹಾಯ ಸಂಘದ ಸದಸ್ಯರು, ಕಲಾ ತಂಡಗಳು ಭಾಗವಹಿಸುವಂತೆ ಆಹ್ವಾನಿಸಲು ತೀರ್ಮಾನಿಸಲಾಯಿತು.
ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಪಪಂ ಸದಸ್ಯರಾದ ಶೋಜಾ, ಕುಮಾರಸ್ವಾಮಿ, ಮುಕುಂದ, ಸುರಯ್ಯಬಾನು, ಕೊಪ್ಪ ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ, ಛಲವಾದಿ ಸಂಘದ ಡಿ.ರಾಮು, ವಾಲ್ಮೀಕಿ ಸಂಘದ ಶ್ರೀನಿವಾಸ್ ಇತರರಿದ್ದರು.