ಸಂವಿಧಾನ ಜಾಗೃತಿ ಜಾಥಾ ಸಮಾರೋಪ

Constitution Awareness Jatha concludes
Published on

ಮಡಿಕೇರಿ:

ಇಡೀ ವಿಶ್ವದಲ್ಲಿ ಭಾರತ ಶ್ರೇಷ್ಠ ಸಂವಿಧಾನ ಹೊಂದಿದ್ದು, ಭಾರತ ಸಂವಿಧಾನದಲ್ಲಿ ಪ್ರತಿಯೊಬ್ಬರೂ ಸಮಾನರು ಎಂಬುದನ್ನು ಪ್ರತಿಪಾದಿಸಲಾಗಿದೆ. ಅದರಂತೆ ಪ್ರತಿಯೊಬ್ಬರೂ ನಡೆದುಕೊಳ್ಳುವಂತಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದರು. ಸಂವಿಧಾನ ಜಾಗೃತಿ ಜಾಥಾ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬುಧವಾರ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಭಾರತದ ಪ್ರಜೆಗಳಾದ ಪ್ರತಿಯೊಬ್ಬರೂ ಸಮನಾಗಿ ಬದುಕುವ ಹಕ್ಕು ಹೊಂದಿದ್ದಾರೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹೀಗೆ ಪ್ರತಿ ಕ್ಷೇತ್ರದಲ್ಲೂ ಸಹ ಸಮಾನ ಅವಕಾಶವನ್ನು ಹೊಂದಿದ್ದಾರೆ. ಸಂವಿಧಾನದಡಿ ಪ್ರತಿಯೊಬ್ಬರೂ ಸಮಾನರಾಗಿದ್ದು, ಬಡವ-ಬಲ್ಲಿದ, ಮೇಲು-ಕೀಲು ಎಂಬುದಿಲ್ಲ. ರಾಷ್ಟ್ರದಲ್ಲಿ ಯಾರೂ ಸಹ ಅಸಮಾನತೆ ಹೊಂದಿರಬಾರದು ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಭಾರತ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ತಿಳಿಸಲಾಗಿದೆ. ಹಾಗೆಯೇ ರಾಜ್ಯ ನಿರ್ದೇಶಕ ತತ್ವಗಳನ್ನು ಸಹ ಒಳಗೊಂಡಿದೆ. ಆ ನಿಟ್ಟಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್. ವೀಣಾ ಮಾತನಾಡಿ ಅಂಬೇಡ್ಕರ್ ಒಬ್ಬ ವ್ಯಕ್ತಿಯಲ್ಲ. ಅವರೊಬ್ಬ ಬಹುಮುಖ ಪ್ರತಿಭೆ ಹೊಂದಿರುವ ಸಮತಾವಾದಿ, ಸಂವಿಧಾನ ಶಿಲ್ಪಿ. ಭಾರತದ ಸಂವಿಧಾನ ಇಲ್ಲದಿದ್ದರೆ ರಾಷ್ಟ್ರದ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದು ಕಷ್ಟಸಾಧ್ಯ. ಕಾನೂನಿನ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಪುರುಷರಂತೆ ಮಹಿಳೆಯರಿಗೂ ಮತದಾನದ ಹಕ್ಕನ್ನು ನೀಡಿರುವುದು ಸಂವಿಧಾನ ಮಹತ್ವವನ್ನು ತಿಳಿಸುತ್ತದೆ. ಎಲ್ಲರೂ ವಿದ್ಯಾವಂತರಾದಾಗ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಸ್ಕೌಟ್ಸ್ ಮತ್ತು ಗೈಡ್ಸ್‌ನ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ಮಾತನಾಡಿ ಭಾರತ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಒದಗಿಸಲಾಗಿದೆ. ಆ ನಿಟ್ಟಿನಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಅರಿವು ಮೂಡಿಸಿದೆ ಎಂದು ಹೇಳಿದರು. ಕಾರ್ಯಕ್ರಮದ ಇನ್ನೋರ್ವ ಅತಿಥಿ ನಿರ್ವಾಣಪ್ಪ ಮಾತನಾಡಿ ಭಾರತದ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದ್ದು, ನಮ್ಮ ಸಂವಿಧಾನ ರಚನೆಯ ಹಿಂದೆ ಶ್ರೇಷ್ಠ ಮಾನವತಾವಾದಿಯಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಅಪರಿಮಿತವಾಗಿದೆ. ಈ ರೀತಿಯಾಗಿ ಸಂವಿಧಾನವನ್ನು ಭಾರತದ ಪ್ರಜೆಗಳಾದ ನಾವೆಲ್ಲರೂ ಅರಿತು ಅದರಂತೆ ಕಾರ್ಯಪ್ರವೃತ್ತರಾಗಬೇಕಾದ ಅಗತ್ಯತೆಯಿದ್ದು, ಸಂವಿಧಾನ ಜಾಗೃತಿ ಜಾಥಾವು ಒಂದು ಉತ್ತಮ ಕಾರ್ಯಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶೇಖರ್ ಮಾತನಾಡಿದರು. ಭಾಗಮಂಡಲ ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಕೆ.ಜೆ.ದಿವಾಕರ, ತಹಶೀಲ್ದಾರ್ ಪ್ರವೀಣ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ನಗರಸಭೆ ಸದಸ್ಯರಾದ ಬಶೀರ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಾರ್ಯದರ್ಶಿ ಬೊಳ್ಳಜ್ಜೀರ ಅಯ್ಯಪ್ಪ, ಹೊನ್ನಪ್ಪ, . ನಗರಸಭೆ ಪೌರಾಯುಕ್ತ ವಿಜಯ್, ಬಾಲಕೃಷ್ಣ ರೈ ಇದ್ದರು. ಕಲಾವಿದ ರಾಜು ಮತ್ತು ತಂಡದವರು ಅಂಬೇಡ್ಕರ್ ಕುರಿತು ಕ್ರಾಂತಿ ಗೀತೆ ಹಾಡಿದರು.

ಸಂವಿಧಾನ ದಿನಾಚರಣೆ ಪ್ರಯುಕ್ತ ಕೊಡಗು ಜಿಲ್ಲೆಯಲ್ಲಿ ಕಳೆದ ೨೭ ದಿನಗಳಿಂದ ಹಮ್ಮಿಕೊಂಡಿರುವ ಜಾಗೃತಿ ಜಾಥಾ ಅಭಿಯಾನದ ಸ್ತಬ್ಧಚಿತ್ರ ಒಳಗೊಂಡ ವಾಹನವನ್ನು ಬುಧವಾರ ನಗರದ ರಾಜಾಸೀಟಿನಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ನಗರದ ರಾಜಾಸೀಟು ಉದ್ಯಾನವನ ಬಳಿಯಿಂದ ಹೊರಟ ಸಂವಿಧಾನ ಜಾಗೃತಿ ಅಭಿಯಾನದ ಸ್ತಬ್ಧಚಿತ್ರ ಒಳಗೊಂಡಂತೆ ಮೆರವಣಿಗೆಯಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಆಟೋ ಚಾಲಕರು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಸಂತ ಮೈಕಲರ ಶಾಲೆಯ ವಿದ್ಯಾರ್ಥಿಗಳು, ಸ್ತ್ರೀಶಕ್ತಿ ಗುಂಪುಗಳು ಇತರರು ಪಾಲ್ಗೊಂಡಿದ್ದರು.
ಜಾಥಾ ರಾಜಾಸೀಟು ಬಳಿಯಿಂದ ಹೊರಟು ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತ ಮೂಲಕ ಕಾವೇರಿ ಕಲಾಕ್ಷೇತ್ರಕ್ಕೆ ಆಗಮಿಸಿತು. ಸಂವಿಧಾನದ ಮಹತ್ವ ತಿಳಿಯುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ೧೦೩ ಗ್ರಾಮ ಪಂಚಾಯಿತಿಗಳು ಸೇರಿದಂತೆ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳು ಒಳಗೊಂಡು ಕಳೆದ ೨೭ ದಿನಗಳ ಕಾಲ ಸಂವಿಧಾನ ಜಾಗೃತಿ ಜಾಥಾ ಅಭಿಯಾನ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net