ಶಾಲಾ ಪಠ್ಯಗಳಲ್ಲಿ ಸಂವಿಧಾನ ಅಧ್ಯಯನ ಸೇರ್ಪಡೆಗೊಳ್ಳಲಿ

nanda
ಸಂವಿಧಾನ ಜಾಗೃತಿ ಜಾಥಾ
Published on

ವಿಜಯವಾಣಿ ಸುದ್ದಿಜಾಲ ನಂದಗುಡಿ
ಭಾರತೀಯ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದ್ದು, ಪೂರ್ಣ ಪ್ರಮಾಣದಲ್ಲಿ ಶಾಲಾ ಪಠ್ಯಪುಸ್ತಕಗಳಲ್ಲಿ ಅಳವಡಿಕೆ ಮಾಡಬೇಕು ಎಂದು ಗ್ರಾಪಂ ಸದಸ್ಯ ಜೆಆರ್‌ಡಿ ಮಂಜುನಾಥ್ ಹೇಳಿದರು.
ತಾಲೂಕಿನ ಜಡಿಗೆನಹಳ್ಳಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾದಲ್ಲಿ ಮಾತನಾಡಿದರು.
ಸಾಕಷ್ಟು ಶ್ರಮವಹಿಸಿ, ಹಲವು ದಿನಗಳ ಕಾಲ ದೀರ್ಘ ಅಧ್ಯಯನ ನಡೆಸಿ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದ್ದರು. ಆದರೆ, ಪ್ರಸ್ತುತ ದಿನಗಳಲ್ಲಿ ಸಾಕಷ್ಟು ವಿದ್ಯಾವಂತರಿಗೆ ಸಂವಿಧಾನದ ಬಗ್ಗೆ ಅರಿವಿಲ್ಲ. ಆದ್ದರಿಂದಲೇ ಸರ್ಕಾರ ಸಂವಿಧಾನ ಜಾಗೃತಿಯ ಜಾಥಾದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮವನ್ನು ರಾಜ್ಯಾದ್ಯಂತ ರೂಪಿಸಿದ್ದು, ಪ್ರಶಂಸನೀಯ ಎಂದರು.
ಗ್ರಾಪಂ ಅಧ್ಯಕ್ಷ ರಮೇಶ್ ಮಾತನಾಡಿ, ಪ್ರಸ್ತುತ ದೇಶದ ಪ್ರತಿಯೊಬ್ಬ ಮನುಷ್ಯನೂ ಸಂವಿಧಾನದ ಧ್ಯೇಯದಡಿ ಜೀವನ ಮಾಡುತ್ತಿದ್ದಾರೆ. ಆದರೆ, ತಾನು ಮಾಡುತ್ತಿರುವ ಜೀವನ ಯಾವುದರಿಂದ ಬಂದಿದೆ ಎಂಬುದನ್ನು ಮರೆತು ಜೀವಿಸುತ್ತಿದ್ದಾನೆ. ಆ ಸಂವಿಧಾನದ ಅರಿವನ್ನು ಪಡೆದುಕೊಂಡು ಅದಕ್ಕೆ ಗೌರವ ಸಮರ್ಪಣೆ ಮಾಡುವ ಕೆಲಸ ನಿತ್ಯ ನಿರಂತರವಾಗಿ ಆಗಬೇಕು ಎಂದರು.
ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಸಿದ್ದರಾಜು, ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚಿನ್ನಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net