

ಚಿಕ್ಕಮಗಳೂರು: ಒಂದು ತಿಂಗಳಿನಿಂದ ಜಿಲ್ಲಾಧ್ಯಂತ ಸಂಚರಿಸಿರುವ ಸಂವಿಧಾನದ ಜಾಗೃತಿ ಜಾಥಾದ ಅಂತಿಮ ದಿನ ಫೆ.21ರಂದು ಚಿಕ್ಕಮಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಸಂವಿಧಾನ ಜಾಗೃತಿ ಹಬ್ಬ ಆಚರಣೆ ಮಾಡುವುದಾಗಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.
ಸಂವಿಧಾನದ ಕುರಿತು ಜಾಗೃತಿ ಮೂಡಿಸುವಲ್ಲಿ ವಿಭಾಗ ಮಟ್ಟಕ್ಕೆ ಪ್ರಥಮ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ ಆರನೇ ಸ್ಥಾನ ಚಿಕ್ಕಮಗಳೂರು ಜಿಲ್ಲೆ ಪಡೆದಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಜಾಗೃತಿ ಜಾಥಾ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಿದ್ದು, ಕಾರ್ಯಕ್ರಮವನ್ನು ಸಂಭ್ರಮದಿಂದ ಮುಕ್ತಾಯಗೊಳಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಫೆ.21ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ಅಧಿಕಾರಿಗಳ ಉಸ್ತುವಾರಿಯಲ್ಲಿ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ. 21ರ ಬೆಳಗ್ಗೆ 7ಗಂಟೆಗೆ ನಗರದ ಹನುಮಂತಪ್ಪ ವೃತ್ತದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಗರದ ಪ್ರಮುಖ 4 ವೃತ್ತದಿಂದ ಕಸ ಸಂಗ್ರಹಿಸಿ ಸಾಗಿಸಲಾಗುವುದು. ಬಳಿಕ ಸಂವಿಧಾನ, ಅಂಬೇಡ್ಕರ್ ಕುರಿತು ಐಡಿಎಸ್‌ಜಿ ಕಾಲೇಜಿನಲ್ಲಿ ಗೋಡೆ ಬರಹ ಸ್ಪರ್ಧೆ ಹಾಗೂ ನಗರದ ಮುಖ್ಯರಸ್ತೆಗಳಲ್ಲಿ ಸಂವಿಧಾನ ಕುರಿತಂತೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಹೇಳಿದರು.ಬೆಳಗ್ಗೆ 10 ಗಂಟೆಗೆ ಫ್ಲಾಗಥಾನ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜ ಹಿಡಿದು ತಾಲೂಕು ಕಚೇರಿಯಿಂದ ಎಂ.ಜಿ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಹಾಗೂ 10.30 ಕ್ಕೆ ಇದೇ ಮಾರ್ಗದಲ್ಲಿ ಆಟೋರಿಕ್ಷಾ, ಸೈಕಲ್ ಜಾಥಾ ಏರ್ಪಡಿಸಲಾಗಿದೆ. ಇದಕ್ಕೂ ಮುನ್ನ ಪಾಲಿಟೆಕ್ನಿಕ್ ಆವರಣದಲ್ಲಿ ಗಿಡ ನೆಡಲಾಗುವುದು ಎಂದರು.ಸಂಜೆ ಗಾಳಿಪಟ ಸ್ಪರ್ಧೆ ಜತೆಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಮೊದಲ ಮೂರು ಸ್ಥಾನಗಳಿಗೆ ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿಪತ್ರ ನೀಡಲಾಗುವುದು. ಸಂಜೆ ಜಿಲ್ಲಾ ಆಟದ ಮೈದಾನದಲ್ಲಿ ಆಹಾರ ಮೇಳ ಏರ್ಪಡಿಸಿದ್ದು, ಸಂವಿಧಾನ ಕುರಿತಂತೆ ಚರ್ಚೆ, ವಿಚಾರ ವಿನಿಮಯ, ಪುಸ್ತಕಗಳ ದೇಣಿಗೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಪಾಲ್ಗೊಳ್ಳುವಂತೆ ತಿಳಿಸಿದರು. ಜಿಪಂ ಸಿಇಒ ಡಾ. ಗೋಪಾಲಕೃಷ್ಣ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗೇಶ್, ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಇದ್ದರು.