

ಮೈಸೂರು: ನಗರದಲ್ಲಿ ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಶನಿವಾರ ಸೈಕಲ್ ಜಾಥಾ ಆಯೋಜಿಸಲಾಗಿತ್ತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಸೈಕ್ಲಿಸ್ಟ್ ಅಸೋಸಿಯೇಷನ್‌ನಿಂದ ನಡೆದ ಜಾಥಾಕ್ಕೆ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ನಗರಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್ ಶರೀಫ್ ಚಾಲನೆ ನೀಡಿದರು.
ನಗರದ ಸೈಕ್ಲಿಂಗ್ ಹಾಗೂ ಕ್ರೀಡಾ ಸಂಘಗಳಾದ ಮೈಸೂರು ಅಥ್ಲಿಟ್ಸ್ ಕ್ಲಬ್, ಸೈಕ್ಲೋಪೀಡಿಯಾ, ಮೈಸೂರು ಸೈಕ್ಲಿಂಗ್ ತರಬೇತಿ ಅಕಾಡೆಮಿ, ರಾಯಲ್ ರೈಡರ್ಸ್, ಯುವಜನ ಮತ್ತು ಸೇವಾ ಕ್ರೀಡಾ ಇಲಾಖೆ ಸಹಯೋಗದಲ್ಲಿ ನಡೆದ ಜಾಥಾದಲ್ಲಿ 18 ಮಹಿಳೆಯರನ್ನು ಒಳಗೊಂಡ 75 ಸೈಕಲ್ ಸವಾರರು ಭಾಗವಹಿಸಿದ್ದರು.
ಹಳೇ ಡಿಸಿ ಕಚೇರಿಯಿಂದ ಹೊರಟ ಸೈಕಲ್ ಜಾಥಾ ಹುಣಸೂರು ರಸ್ತೆ ಮೂಲಕ, ಮೆಟ್ರೋಪಾಲ್ ಸರ್ಕಲ್, ರೈಲ್ವೆ ಸ್ಟೇಷನ್ ಸರ್ಕಲ್ ನಿಂದ ಎಲ್ಐಸಿ ವೃತ್ತ ತಲುಪಿ ಅಲ್ಲಿಂದ ಗಾಂಧಿನಗರ ಅಂಬೇಡ್ಕರ್ ವೃತ್ತಕ್ಕೆ ತೆರಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಸರ್ಕಾರಿ ಅತಿಥಿ ಗೃಹದಿಂದ ಸರ್ಕಲ್ ಜಾಥಾ ಬೆಂಗಳೂರು ರಸ್ತೆಯ, ಮೂಲಕ ಅಶೋಕ ರಸ್ತೆ ತಲುಪಿ, ಟೌನ್ ಹಾಲ್ ವೃತ್ತದಲ್ಲಿ ಸಮಾಪ್ತಿಯಾಯಿತು.
ಜಾಥಾ ವೇಳೆ ಸಂವಿಧಾನ ಮಹತ್ವ ತಿಳಿಸುವ ವಿವಿಧ ಘೋಷಣೆ ಕೂಗಿ ಸಾರ್ವಜನಿಕರ ಗಮನ ಸೆಳೆಯಲಾಯಿತು.
ನಗರ ಪಾಲಿಕೆ ಉಪ ಆಯುಕ್ತ ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಂಗೇಗೌಡ, ರೂಪದರ್ಶಿ ತನಿಷ್ಕಾ ಮೂರ್ತಿ, ವಾಣಿಜ್ಯ ತೆರಿಗೆ ನಿವೃತ್ತ ಉಪ ಆಯುಕ್ತ, ಹಿರಿಯ ಸೈಕಲ್ ಪಟು ರಮೇಶ್ ನರಸಯ್ಯ, ಸಂಘಟಕರಾದ ವೀಣಾ ಅಶೋಕ್ ಇತರರು ಇದ್ದರು.