

ಮಂಡ್ಯ: ಹಣ ಅಥವಾ ಅಧಿಕಾರ ಬಲವಿಲ್ಲದ ಸಾಮಾನ್ಯ ವ್ಯಕ್ತಿ ಎಲ್ಲ ಹಕ್ಕು ಪಡೆಯಲು ಮತ್ತು ತನ್ನ ಘನತೆಗೆ ಧಕ್ಕೆಯಾದ ಸಂದರ್ಭದಲ್ಲಿ ದನಿ ಎತ್ತಲು ಅಧಿಕಾರ ನೀಡಿರುವುದು ಸಂವಿಧಾನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಕರ್ನಾಟಕ ಸ್ವಾಭಿಮಾನಿ ಸಮಸಮಾಜ(ಕೆಎಸ್‌ಎಸ್)ಸಂಘಟನೆ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ 75ನೇ ಸಂವಿಧಾನ ಅಮೃತ ಮಹೋತ್ಸವ ಆಚರಣೆ ಮತ್ತು ಕರ್ನಾಟಕ ಸ್ವಾಭಿಮಾನಿ ಸಮ ಸಮಾಜ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಂವಿಧಾನ ಪ್ರಜ್ಞೆ ಹೆಚ್ಚಿಸಿಕೊಳ್ಳುವುದು ಮತ್ತು ರಕ್ಷಿಸಿಕೊಳ್ಳುವುದು ಪ್ರತಿ ನಾಗರಿಕರ ಕರ್ತವ್ಯ. ದಲಿತ ಸಮುದಾಯಕ್ಕೆ ಮಾತ್ರವೇ ಸಂವಿಧಾನ ರಚನೆಯಾಗಿದೆ ಎಂಬ ಪೂರ್ವಾಗ್ರಹ ಒಳ್ಳೆಯದಲ್ಲ. ಎಲ್ಲರ ಹಿತವನ್ನು ಬಯಸುವ ಸಂವಿಧಾನವನ್ನು ಮುಂದಿನ ತಲೆಮಾರಿಗೆ ಸುರಕ್ಷಿತವಾಗಿ ತಲುಪಿಸುವುದು ನಮ್ಮ ಹೊಣೆ ಎಂದರು.
ಸಮಾಜದ ಹಿತ ದೃಷ್ಟಿಯಿಂದ ಸಾರ್ವಜನಿಕರನ್ನು ದೇಶದ ಇತಿಹಾಸದತ್ತ ತಿರುಗಿಸಬೇಕಿದೆ. ಮುಂದೊಂದು ದಿವಸ ನಮ್ಮ ಕಾಲ ಮುಗಿಯುತ್ತಾ ಬಂದಿದೆ. ನಮ್ಮ ಹಿಂದೆ ಬರುವಂತಹ ಹೊಸ ಹೊಸ ಪೀಳಿಗೆಗೆ ಅನಾಹುತ ಕಾದಿದೆ. ಆದ್ದರಿಂದ ಸಂವಿಧಾನದ ಪ್ರಜ್ಞೆ ಹೆಚ್ಚಿಸಿಕೊಳ್ಳಬೇಕು. ನಮ್ಮ ಸಂವಿಧಾನ ಎಲ್ಲ ಗ್ರಂಥಗಳಿಗಿಂತಲೂ ಶ್ರೇಷ್ಠವಾಗಿದೆ ಎಂದು ಪ್ರಜ್ಞಾವಂತರು ಹೇಳಿದ್ದಾರೆ. ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಪ್ರತಿ ನಾಗರಿಕರಿಗೂ ಶಕ್ತಿ ತುಂಬುವ ಗ್ರಂಥ ಸಂವಿಧಾನ ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿದ ಉರಿಲಿಂಗಪೆದ್ದಿ ಮಠದ ಪೀಠಾಧ್ಯಕ್ಷ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಇಂದಿನ ಸಮಾಜಕ್ಕೆ ಪುತ್ಥಳಿಯ ಬದಲಾಗಿ, ಪುಸ್ತಕದ ಅಂಬೇಡ್ಕರ್, ಮೆರವಣಿಗೆಯ ಬದಲಾಗಿ ಬರವಣೆಗೆಯ ಅಂಬೇಡ್ಕರ್ ಬೇಕಾಗಿದೆ. ಅಂಬೇಡ್ಕರ್ ಅವರನ್ನು ಪೂಜಿಸುವುದಕ್ಕಿಂತ ಚಿಂತನೆಗಳನ್ನು ಅರಿತು ಆಚರಣೆಗೆ ತರುವುದು ಮುಖ್ಯವಾಗಿದೆ ಎಂದು ಹೇಳಿದರು.
ಶಾಸಕ ರವಿಕುಮಾರ್ ಗಣಿಗ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸ್ಟಾರ್ ಚಂದ್ರು, ಸಂಘಟನೆಯ ರಾಜ್ಯಾಧ್ಯಕ್ಷ ಎಚ್.ಎನ್.ನರಸಿಂಹಮೂರ್ತಿ, ಸಂಸ್ಥಾಪಕ ಅಧ್ಯಕ್ಷ ಡಾ. ಕುಮಾರಸ್ವಾಮಿ ಸಾಕ್ಯ, ಮುಡಾ ಅಧ್ಯಕ್ಷ ನಹೀಂ, ನಾವು ದ್ರಾವಿಡ ಕನ್ನಡಿಗರು ಚಳವಳಿಯ ಹನಕೆರೆ ಅಭಿ, ಲೇಖಕ ಎಸ್.ಸಿದ್ದಯ್ಯ, ಅಬಕಾರಿ ಅಧಿಕಾರಿ ತಿರುಮಲಾಪುರ ನಾರಾಯಣ, ಎಲ್.ಸಂದೇಶ್, ಲಕ್ಷ್ಮಣ್ ಚೀರನಹಳ್ಳಿ ಇತರರಿದ್ದರು.