

ಮೈಸೂರು: ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲಾತಿ ನೀಡಲು ಸಂವಿಧಾನ ಬದಲಾವಣೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ವಿವಿಧೆಡೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ನೇತೃತ್ವದಲ್ಲಿ ಪುರಭವನ ಮುಂಭಾಗದ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಯಿತು. ಬಿಜೆಪಿ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಸಂದರ್ಭ ಡಿ.ಕೆ. ಶಿವಕುಮಾರ್ ಪ್ರತಿಕೃತಿ ದಹಿಸಲು ಮುಂದಾದ ಸಂದರ್ಭ ಪೊಲೀಸರು ಪ್ರತಿಕೃತಿಯನ್ನು ವಶಕ್ಕೆ ಪಡೆದರು. ಈ ಸಂದರ್ಭ ಬಿಜೆಪಿ ಕಾರ್ಯಕರ್ತರು ಡಿ.ಕೆ. ಶಿವಕುಮಾರ್ ಭಾವಚಿತ್ರವನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ಮುಸ್ಲಿಮರಿಗಾಗಿ ಸಂವಿಧಾನ ಬದಲಾವಣೆ ವಾಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಮಾಡಲು ನಾವು ಬಿಡುವುದಿಲ್ಲ. ನಗರದಲ್ಲಿ ಮೂರು ದಿನಗಳ ಕಾಲ ನಿರಂತರ ಪ್ರತಿಭಟನೆ ಮಾಡುತ್ತೇವೆ. ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.
ಮುಸ್ಲಿಮರನ್ನು ಓಲೈಕೆ ಮಾಡುತ್ತಿರುವ ಡಿ.ಕೆ.ಶಿವಕುಮಾರ್ ಅವರು ಸಂವಿಧಾನವಿರೋಧಿ ನಡೆಯನ್ನು ಅನುಸರಿಸುತ್ತಿದ್ದಾರೆ. ಮತ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರನ್ನು ತಮ್ಮ ಸಹೋದರರೆಂದು ಹೇಳುತ್ತಾರೆ. ಈಗ ಸಂವಿಧಾನದ ಬದಲಾವಣೆಯಮಾತು ಹೇಳಿರುವುದು ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಎಚ್.ಜಿ.ಗಿರಿಧರ್, ವಾಣೀಶ್ ಕುಮಾರ್, ಪ್ರಮೀಳಾ ಭರತ್, ರಂಗಸ್ವಾಮಿ, ಎಂ.ಯು. ಸುಬ್ಬಯ್ಯ, ರವೀಂದ್ರ, ರೇಣುಕಾರಾಜ್, ಹೇಮಾ ನಂದೀಶ್, ರಾಕೇಶ್ ಗೌಡ, ಕಿರಣ್ ಗೌಡ ಹಾಗೂ ಇತರರು ಇದ್ದರು.
ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ: ಆಶೋಕಪುರಂ ಪೊಲೀಸ್ ಠಾಣೆ ಬಳಿಯ ಅಂಬೇಡ್ಕರ್ ಪುತ್ಥಳಿ ಮುಂಭಾಗ ಶಾಸಕ ಟಿ.ಎಸ್. ಶ್ರೀವತ್ಸ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.
ಈ ಸಂದರ್ಭ ಮಾತನಾಡಿದ ಶಾಸಕ ಟಿ.ಎಸ್.ಶ್ರೀವತ್ಸ, ಡಿ.ಕೆ. ಶಿವಕುಮಾರ್ ಅವರನ್ನು ತಕ್ಷಣ ಉಪಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು. ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಅವರ ವಿರುದ್ಧ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿ ತಕ್ಷಣವೇ ಬಂಧಿಸಬೇಕು. ಆದರೆ ಪೊಲೀಸರು ಅವರ ಮೇಲೆ ಇನ್ನೂ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹನಿ ಟ್ರ್ಯಾಪ್ ವಿಚಾರದಲ್ಲೂ ಡಿ.ಕೆ. ಶಿವಕುಮಾರ್ ಹೆಸರು ಕೇಳಿ ಬರುತ್ತಿದೆ. ಆದರೆ, ಇನ್ನು ಯಾವುದೇ ಕ್ರಮ ಆಗಿಲ್ಲ. ಇದೀಗ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಅವರನ್ನು ಕೂಡಲೇ ಬಂಧಿಸದೆ ಹೋದರೆ ಬಿಜೆಪಿಯಿಂದ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಶಿವಕುಮಾರ್, ಬಿ.ವಿ.ಮಂಜುನಾಥ್, ಛಾಯಾದೇವಿ, ಶಾರದಮ್ಮ, ಶಾಂತಮ್ಮ, ಜೋಗಿಮಂಜು ಹಾಗೂ ಇತರರು ಪಾಲ್ಗೊಂಡಿದ್ದರು.
ಕೆೆಂಪಯ್ಯನಹುಂಡಿಯಲ್ಲಿ ಪ್ರತಿಭಟನೆ: ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ನೇತೃತ್ವದಲ್ಲಿ ಹಳೇ ಕೆಂಪಯ್ಯನಹುಂಡಿ ವೃತ್ತದ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾತನಾಡಿದ ಎಲ್.ಆರ್. ಮಹದೇವಸ್ವಾಮಿ, ಅಲ್ಪಸಂಖ್ಯಾತರ ಓಲೈಕೆಗೆ ಡಿ.ಕೆ. ಶಿವಕುಮಾರ್ ಸಂವಿಧಾನ ಬದಲಾವಣೆಯ ಮಾತುಗಳನ್ನು ಆಡಿರುವುದು ಖಂಡನೀಯ. ಕೂಡಲೇ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಡಾ. ರೇವಣ್ಣ, ನಗರ್ಲೆ ಮಹದೇವಸ್ವಾಮಿ, ಸತ್ಯಪ್ಪ , ಮಡವಾಡಿ ಮಹೇಶ್, ಹೇಳವರಹುಂಡಿ ಸಿದ್ದಪ್ಪ, ತೊಟ್ಟವಾಡಿ ಅನಿಲ್, ದಾಯನಂದ ಪಟೇಲ್, ರಾಮಚಂದ್ರು, ವೆಂಕಟರಮಣ ಶೆಟ್ಟಿ ,ಡಾ. ಮಲ್ಲಿಕಾರ್ಜುನ, ಶರತ್ ಪುಟ್ಟಬುದ್ದಿ ,ಜಯಣ್ಣ ಹಾಗೂ ಇತರರು ಪಾಲ್ಗೊಂಡಿದ್ದರು.