ಜಾತಿ, ಧರ್ಮಕ್ಕಿಂತ ಮಾನವೀಯತೆ ಮುಖ್ಯ

CTD VICHARA SANKIRANA----
Published on

ಚಿತ್ರದುರ್ಗ: ಜಾತಿ, ಧರ್ಮಕ್ಕಿಂತ ಮಾನವೀಯತೆ ಮುಖ್ಯ ಎಂದು ಹಿರಿಯ ವಕೀಲ ಬಿ.ಕೆ. ರಹಮತ್‌ವುಲ್ಲಾ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಹಿಂದು-ಮುಸ್ಲಿಂ-ಕ್ರೈಸ್ತ ರು, ಧರ್ಮ ಯಾವುದಾದರೇನು? ನಾವು ಮೊದಲು ಭಾರತೀಯರು’ ವಿಚಾರ ಸಂಕಿರಣದಲ್ಲಿ ಮಾತನಾಡಿ, ಜಾತ್ಯಾತೀತ ಭಾರತದಲ್ಲಿ ಎಲ್ಲ ಧರ್ಮಿಯರು ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ ಎಂದರು.

ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲ ಜಾತಿ, ಧರ್ಮದವರಿಗೂ ಸಮಾನತೆ ನೀಡಿದ್ದಾರೆ. ಮುಸ್ಲಿಮರಿಗೆ ಕುರಾನ್, ಹಿಂದುಗಳಿಗೆ ಭಗವದ್ಗೀತೆ, ಕ್ರೈಸ್ತರಿಗೆ ಬೈಬಲ್ ಇದೆ. ಈ ಎಲ್ಲ ಗ್ರಂಥಗಳಿಗಿಂತ ಸಂವಿಧಾನ ದೊಡ್ಡ ಗ್ರಂಥ. ಮತದಾರರು ಯೋಗ್ಯರನ್ನು ಆಯ್ಕೆ ಮಾಡಿದಾಗ ಸದೃಢ ದೇಶ ಕಟ್ಟಲು ಸಾಧ್ಯ. ಸಂವಿಧಾನ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಫಾದರ್ ಎಂ.ಎಸ್. ರಾಜು ಮಾತನಾಡಿ, ಬಹುಸಂಖ್ಯಾತರಿಂದ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಶೋಷಣೆ ನಡೆಯುತ್ತಿದೆ. ಮಣಿಪುರದಲ್ಲಿ ಜನಾಂಗೀಯ ಘರ್ಷಣೆಗೆ ಅನೇಕರು ಬಲಿಯಾಗಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರು, ಅಲ್ಪ ಸಂಖ್ಯಾತರು ತಮ್ಮ ರಕ್ಷಣೆಗೆ ಹೋರಾಟ ಮಾಡುವಂಥ ಪರಿಸ್ಥಿತಿ ಇದೆ. ಶ್ರೇಷ್ಠ ಗ್ರಂಥ ಸಂವಿಧಾನವನ್ನು ಪ್ರತಿಯೊಬ್ಬರೂ ಓದಬೇಕು. ದೇಶದ ಬಹುತ್ವ ನಾಶಪಡಿಸಲು ಸಂಚು ರೂಪಿಸುತ್ತಿರುವವರ ವಿರುದ್ಧ ಜಾಗೃತರಾಗಿರಬೇಕೆಂದು ಹೇಳಿದರು.

ಲೇಖಕ ಎಚ್. ಆನಂದ್‌ಕುಮಾರ್, ಅಧ್ಯಕ್ಷತೆ ವಹಿಸಿದ್ದ ಎ. ಸಾಧಿಕ್‌ವುಲ್ಲಾ ಮಾತನಾಡಿದರು. ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ನ್ಯಾಯವಾದಿ ದಿಲ್‌ಶಾದ್ ಉನ್ನಿಸಾ, ಆಕಾಶವಾಣಿ ಡಾ. ನವೀನ್‌ಮಸ್ಕಲ್, ಕರ್ನಾಟಕ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಆರ್. ಗಿರೀಶ್‌ನಾಯ್ಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net