

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅವಧಿ ಮುಕ್ತಾಯ ಹಂತದಲ್ಲಿದ್ದು, ಚುನಾವಣೆಗೂ ಮುನ್ನ ರಾಜ್ಯ ಸರ್ಕಾರ ವಾರ್ಡ್ ಮರುವಿಂಗಡಣೆಗೆ ಮುಂದಾಗಿದೆ. 198 ವಾರ್ಡ್ ಗಳನ್ನೂ ನಗರಾಭಿವೃದ್ಧಿ ಇಲಾಖೆ ಮರುವಿಂಗಡಣೆ ಮಾಡಿ ಕರಡು ಪ್ರಕಟಿಸಿದೆ. ಮೂವರು ಮಾಜಿ ಮೇಯರ್ಗಳು ಪ್ರತಿನಿಧಿಸುತ್ತಿದ್ದ ವಾರ್ಡ್ಗಳು ಸೇರಿ 28 ಅಸ್ತಿತ್ವ ಕಳೆದುಕೊಂಡರೆ, ಅದೇ ಸ್ಥಾನಕ್ಕೆ 28 ವಾರ್ಡ್ ಗಳು ಹೊಸದಾಗಿ ಉದಯಿಸಲಿವೆ.
ಈ ಹಿಂದೆ ಮೇಯರ್ ಆಗಿದ್ದ ಕಾಂಗ್ರೆಸ್ನ ಗಂಗಾಂಬಿಕೆ ಮಲ್ಲಿಕಾರ್ಜುನ್ ಪ್ರತಿನಿಧಿಸುತ್ತಿರುವ ಜಯನಗರ ಹಾಗೂ ಕಾಂಗ್ರೆಸ್ನ ಪದ್ಮಾವತಿ ಪ್ರತಿನಿಧಿಸುತ್ತಿರುವ ಪ್ರಕಾಶನಗರ ವಾರ್ಡ್ ಅಸ್ತಿತ್ವ ಕಳೆದುಕೊಳ್ಳಲಿವೆ. ಆದರೆ, ಕಾಂಗ್ರೆಸ್ನವರೇ ಆಗಿರುವ ಸಂಪತ್ ರಾಜ್ ಪ್ರತಿನಿಧಿಸುತ್ತಿರುವ ದೇವರಜೀವನಹಳ್ಳಿ ಹಾಗೂ ಮಂಜುನಾಥ ರೆಡ್ಡಿ ಪ್ರತಿನಿಧಿಸುತ್ತಿರುವ ಮಡಿವಾಳ ವಾರ್ಡ್ ಗಳು ಉಳಿದುಕೊಳ್ಳಲಿವೆ. ಮೇಯರ್ ಆಗಿದ್ದವರ ಕ್ಷೇತ್ರವನ್ನು ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿ ಇಲ್ಲವಾಗಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕ್ರಮ ಸಂಖ್ಯೆ ಬದಲು: 198 ವಾರ್ಡ್ಗಳ ಪೈಕಿ ಕೆಂಪೇಗೌಡ ವಾರ್ಡ್ (1), ಚೌಡೇಶ್ವರಿ ವಾರ್ಡ್ (2) ಹಾಗೂ ಯಲಹಂಕ ಉಪನಗರ ವಾರ್ಡ್ (4) ಹೊರತುಪಡಿಸಿ ಎಲ್ಲ ಹಾಲಿ ವಾರ್ಡ್ಗಳ ಕ್ರಮ ಸಂಖ್ಯೆಯೂ ಬದಲಾಗಲಿದೆ.
ಗೋವಿಂದರಾಜನಗರದಲ್ಲಿ ಮೂರು: ವಿಧಾನಸಭಾ ಕ್ಷೇತ್ರವಾರು ವಾರ್ಡ್ಗಳಲ್ಲಿ ಬದಲಾವಣೆಯಲ್ಲಿ ಸಚಿವ ವಿ. ಸೋಮಣ್ಣ ಪ್ರತಿನಿಧಿಸುವ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಮುಂಚೂಣಿಯಲ್ಲಿದೆ. ಈ ಕ್ಷೇತ್ರದ ವ್ಯಾಪ್ತಿಯ ಅಗ್ರಹಾರ ದಾಸರಹಳ್ಳಿ, ಮಾರೇನಹಳ್ಳಿ ಹಾಗೂ ಮೂಡಲಪಾಳ್ಯ ವಾರ್ಡ್ ಗಳು ಅಸ್ತಿತ್ವ ಕಳೆದುಕೊಳ್ಳಲಿವೆ. ಯಲಹಂಕ, ರಾಜರಾಜೇಶ್ವರಿ ನಗರ, ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರ, ಪದ್ಮನಾಭನಗರ, ಬಿಟಿಎಂ ಲೇಔಟ್, ಬೆಂಗಳೂರು ದಕ್ಷಿಣ, ಪುಲಕೇಶಿನಗರ, ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಂದು ವಾರ್ಡ್, ಬ್ಯಾಟರಾಯನಪುರ, ಹೆಬ್ಬಾಳ, ಚಾಮರಾಜಪೇಟೆ, ಚಿಕ್ಕಪೇಟೆ, ಜಯನಗರ, ಶಿವಾಜಿನಗರ, ಗಾಂಧಿನಗರ, ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳ ತಲಾ 2 ವಾರ್ಡ್ಗಳು ಅಸ್ತಿತ್ವದಲ್ಲಿ ಇರುವುದಿಲ್ಲ, ಆ ಸ್ಥಾನಕ್ಕೆ ಅಷ್ಟೇ ಸಂಖ್ಯೆಯ ಹೊಸ ವಾರ್ಡ್ಗಳು ಸೇರ್ಪಡೆ ಆಗಲಿವೆ. ಕೆ.ಆರ್.ಪುರ, ಯಶವಂತಪುರ, ದಾಸರಹಳ್ಳಿ, ಸರ್ವಜ್ಞ ನಗರ, ಸಿ.ವಿ. ರಾಮನ್ ನಗರ, ವಿಜಯನಗರ, ಬಸವನಗುಡಿ, ಮಹದೇವಪುರ ಕ್ಷೇತ್ರದ ವಾರ್ಡ್ಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಆಕ್ಷೇಪಣೆ ಸಲ್ಲಿಕೆಗೆ 15 ದಿನಗಳ ಅವಕಾಶ
ಸದ್ಯ ಪ್ರಕಟವಾಗಿರುವ ಕರಡು ಪುನರ್ವಿಂಡಣೆಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಸರ್ಕಾರ 15 ದಿನ ಕಾಲಾವಕಾಶ ನೀಡಿದೆ. ಆಕ್ಷೇಪಣೆಗಳನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಸಲ್ಲಿಸಬಹುದು. ಸದ್ಯದಲ್ಲೆ ಚುನಾವಣೆ ನಡೆಯುವ ಕಾರಣ ಸರ್ಕಾರ ತನಗಿಷ್ಟ ಬಂದಂತೆ ವಾರ್ಡ್ ಪುನರ್ವಿಂಗಡಣೆ ಮಾಡಿಕೊಂಡಿದೆ ಎಂಬ ಆರೋಪಗಳು ಕೇಳಿಬಂದಿವೆ. ಪ್ರತಿಪಕ್ಷಗಳ ನಾಯಕರು ಸಬಲರಾಗಿದ್ದ ಅನೇಕ ವಾರ್ಡ್ಗಳನ್ನು ಇಲ್ಲವಾಗಿಸಲಾಗಿದೆ. ಅನೇಕ ವಾರ್ಡ್ಗಳ ಹೆಸರು ಉಳಿದುಕೊಂಡಿದೆಯಾದರೂ ವ್ಯಾಪ್ತಿ ಯಲ್ಲಿ ಮನಬಂದಂತೆ ಹಾಗೂ ಪ್ರತಿಪಕ್ಷದ ಮತದಾರರ ಪ್ರದೇಶಗಳನ್ನು ಹರಿದು ಹಂಚಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸೂಕ್ತ ಸಾಕ್ಷ್ಯಾಧಾರಗಳನ್ನು ಜಿಲ್ಲಾಧಿಕಾರಿಗೆ ನೀಡಲಾಗುತ್ತದೆ ಎಂದು ನಾಯಕರೊಬ್ಬರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಹೈಕೋರ್ಟ್ಗೆ ಸಲ್ಲಿಸಿರುವ ವಾರ್ಡ್ ಮರುವಿಂಗಡಣೆ ಗೆಜೆಟ್ ಅಧಿಸೂಚನೆಯಲ್ಲಿ ದ್ವೇಷದ ರಾಜಕಾರಣ ಎದ್ದುಕಾಣುತ್ತಿದೆ. ಕಾಂಗ್ರೆಸ್ನ ಪ್ರಭಾವಿ ನಾಯಕರು, ಮಾಜಿ ಮೇಯರ್ಗಳ ವಾರ್ಡ್ಗಳನ್ನು ಬದಲಾಯಿಸಿ, ಗೊಂದಲಗಳನ್ನು ಸೃಷ್ಟಿಸಲಾಗಿದೆ. ಪದ್ಮಾವತಿ, ಗಂಗಾಂಬಿಕೆ, ಸಂಪತ್ರಾಜ್ ಸೇರಿ ಕಾಂಗ್ರೆಸ್ ಮತಗಳು ಹೆಚ್ಚಾಗಿರುವ ವಾರ್ಡ್ಗಳನ್ನೇ ಬದಲಾಯಿಸಿದ್ದಾರೆ. 198 ವಾರ್ಡ್ ಗೆಲ್ಲಬೇಕು ಎಂಬ ಬಿಜೆಪಿ ಕನಸಿಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ. | ಎಂ. ಶಿವರಾಜು ಕಾಂಗ್ರೆಸ್ ಪಾಲಿಕೆ ಸದಸ್ಯ
ಇಲ್ಲವಾಗುವ ವಾರ್ಡ್ಗಳು
ಅಟ್ಟೂರು, ಬ್ಯಾಟರಾಯನಪುರ, ಕುವೆಂಪುನಗರ, ಎಚ್ಎಂಟಿ, ಮಹಾಲಕ್ಷ್ಮೀಪುರ, ಕಾಡು ಮಲ್ಲೇಶ್ವರ, ಗಂಗೇನಹಳ್ಳಿ, ಜಯಚಾಮರಾಜೇಂದ್ರ ನಗರ, ಎಸ್.ಕೆ. ಗಾರ್ಡನ್, ಜಯಮಹಲ್, ಶಿವಾಜಿನಗರ, ಅಗರ, ಸುಭಾಷ್ ನಗರ, ಕಾಟನ್ಪೇಟೆ, ಪ್ರಕಾಶ ನಗರ, ಕಾಮಾಕ್ಷಿಪಾಳ್ಯ, ಅಗ್ರಹಾರ ದಾಸರಹಳ್ಳಿ, ಮಾರೇನಹಳ್ಳಿ, ಮೂಡಲ ಪಾಳ್ಯ, ರಾಯಪುರಂ, ಕೃಷ್ಣರಾಜ ಮಾರುಕಟ್ಟೆ, ಸುಧಾಮನಗರ, ಜಯನಗರ, ಗಣೇಶ ಮಂದಿರ, ಆಡುಗೋಡಿ, ಪಟ್ಟಾಭಿರಾಮನಗರ, ಜೆ.ಪಿ. ನಗರ, ಕೋಣನಕುಂಟೆ.