ಮಾಜಿ ಶಾಸಕರ ದರ್ಪದಿಂದ ರೋಣ ಕ್ಷೇತ್ರದ ಮಾನ ಹರಾಜು

07 GJD 1
Published on

ವಿಜಯವಾಣಿ ಸುದ್ದಿಜಾಲ ಗಜೇಂದ್ರಗಡ

ಮೊನ್ನೆ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಗಜೇಂದ್ರಗಡ ತಹಸೀಲ್ದಾರ್‌ಗೆ ಮಾಜಿ ಸಚಿವ ಕಳಕಪ್ಪ ಬಂಡಿ ಅವರು ತೋರಿದ ಅಗೌರವ ಹಾಗೂ ನಿಂದನೆಯಿಂದ ರೋಣ ಮತಕ್ಷೇತ್ರದ ಜನರು ತಲೆ ತಗ್ಗಿಸುವಂತಾಗಿದೆ ಎಂದು ಗಜೇಂದ್ರಗಡ- ಉಣಚಗೇರಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿದ್ದಪ್ಪ ಬಂಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗಜೇಂದ್ರಗಡ, ರೋಣ, ನರೇಗಲ್ಲ ಮತ್ತು ಗದಗ ಬ್ಲಾಕ್ ಕಾಂಗ್ರೆಸ್ ಸಮಿತಿಗಳಿಂದ ಗುರುವಾರ ಏರ್ಪಾಟಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಡಿದರು.

ಮಾಜಿ ಶಾಸಕರ ಗೂಂಡಾ ವರ್ತನೆ ನೋಡಿ ಸರ್ಕಾರಿ ನೌಕರರು ರೋಣ ಮತಕ್ಷೇತ್ರಕ್ಕೆ ಬರಲು ಹಿಂದೇಟು ಹಾಕುವಂತಾಗಿದೆ. ಇವರ ಅವಧಿಯಲ್ಲಿ ಕ್ಷೇತ್ರದಲ್ಲಿ ಶೇ50ರಷ್ಟು ಸರ್ಕಾರಿ ಹುದ್ದೆಗಳು ಖಾಲಿ ಇದ್ದವು. ತಹಸೀಲ್ದಾರ್ ದುಡ್ಡು ಕೊಟ್ಟು ಪೋಸ್ಟಿಂಗ್ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸುತ್ತಿರುವುದು ಶುದ್ಧ ಸುಳ್ಳು, ಮಾಜಿ ಶಾಸಕರ ಅವಧಿಯಲ್ಲಿ ಇಂತಹ ಹುದ್ದೆಗಳಿಗೆ ಎಷ್ಟು ಹಣ ನಿಗದಿ ಮಾಡಿದ್ದರು ಎಂಬುದನ್ನು ಬಹಿರಂಗ ಪಡಿಸಲು ಎಂದು ಸವಾಲು ಹಾಕಿದರು.

ಅವರು ಶಾಸಕರಾಗಿದ್ದಾಗ ತಮ್ಮ ಪ್ರಭಾವ ಬಳಸಿಕೊಂಡು ಅಧಿಕಾರಿಗಳಿಗೆ ಒತ್ತಡ ಹಾಕಿ, ಪುರಸಭೆಯ 10 ಲಕ್ಷಕ್ಕೂ ಅಧಿಕ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆಪಾದಿಸಿದರು.

ಜಿಲ್ಲಾಧಿಕಾರಿ, ಪೋಲಿಸ್ ವರಿಷ್ಠಾಧಿಕಾರಿ, ತಹಸೀಲ್ದಾರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಕಳಕಪ್ಪ ಬಂಡಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅವರನ್ನು ಜಿಲ್ಲೆಯಿಂದ ಹೊರಗಿಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಪುರಸಭೆ ಸದಸ್ಯ ಮುರ್ತುಜಾ ಡಾಲಯತ್ ಮಾತನಾಡಿ, ಕಳಕಪ್ಪ ಬಂಡಿ ಅವರು ತಹಸೀಲ್ದಾರ್ ಅವರಿಗೆ ಕ್ಷಮೆ ಯಾಚಿಸಬೇಕು. ಕಾಂಗ್ರೆಸ್ ಪಕ್ಷದವರೇ ಒತ್ತಾಯ ಮಾಡಿ ಸರ್ಕಾರಿ ನೌಕರರಿಂದ ಮನವಿ ಕೊಡಿಸುತ್ತಿದ್ದಾರೆ ಎಂಬ ಹೇಳಿಕೆಯನ್ನು ಹಿಂಪಡೆಯಬೇಕು. ಸರ್ಕಾರಿ ಕಚೇರಿಗಳಲ್ಲಿ ರಾಜಕೀಯ ಮಾಡುವ ಸಣ್ಣತನ ನಮ್ಮದಲ್ಲ. ನಮ್ಮ ಪಕ್ಷದ ಶಾಸಕರು ಇದನ್ನು ನಮಗೆ ಕಲಿಸಿಕೊಟ್ಟಿಲ್ಲ ಎಂದರು.

ಬಂಡಿ ಅವರ ಅವಧಿಯಲ್ಲಿ ರೈತರಿಗಾಗಿ ಒಂದು ತಿಂಗಳು ಜಿ.ಎಸ್. ಪಾಟೀಲ ಹೋರಾಟ ಮಾಡಿದ್ದರು. ಆ ಸಮಯದಲ್ಲಿ ಒಂದೇ ಒಂದು ಕೆಟ್ಟ ಪದವನ್ನು ಅವರ ಬಗ್ಗೆ ಮಾತನಾಡಿರಲಿಲ್ಲ. ಮಾಜಿ ಸಚಿವರು ಮಾತನಾಡುವ ರೀತಿ, ನೀತಿಗಳು ಅವರು ಹಾಗೂ ಅವರ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ. ಎಲ್ಲ ಅಧಿಕಾರಿಗಳ ಜತೆ ಸಹನೆಯಿಂದ ವರ್ತಿಸಬೇಕು. ಕಳಕಪ್ಪ ಬಂಡಿ ಅವರ ಇಂಥ ಕೆಟ್ಟ ನಡವಳಿಕೆಯಿಂದಲೇ ಕ್ಷೇತ್ರದ ಹೆಸರು ಸುದ್ದಿ ವಾಹಿನಿಗಳಲ್ಲಿ ರಾರಾಜಿಸಿದೆ. ರೋಣ ಮತಕ್ಷೇತ್ರದ ಘನತೆ ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು.

ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಪುರಸಭೆ ಸ್ಥಾಯಿ ಸಮಿತಿ ಚೇರ್ಮನ್ ಮುದಿಯಪ್ಪ ಮುಧೋಳ, ವೆಂಕಟೇಶ ಮುದಗಲ್ಲ, ಬಸವರಾಜ ಹೂಗಾರ, ಉಮೇಶ ರಾಠೋಡ, ರಾಮಚಂದ್ರ ಹುದ್ದಾರ ಇತರರಿದ್ದರು.

ಬ್ಲಾಕ್ ಅಧ್ಯಕ್ಷರ ಗೈರು

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸುದ್ದಿಗೋಷ್ಠಿಯಾಗಿದ್ದರೂ ಆಯಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಗೈರು ಹಾಜರಿ ಎದ್ದು ಕಂಡಿತು. ಅನೇಕರು ಪಾಲ್ಗೊಳ್ಳದೇ ಇರುವುದು ಕಾರ್ಯಕರ್ತರಲ್ಲಿ ಅನುಮಾನ ಮೂಡಿಸಿದೆ. ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎಸ್. ಸೋಂಪುರ, ಪುರಸಭೆ ಸದಸ್ಯ ರಾಜು ಸಾಂಗ್ಲಿಕರ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net