ಅಗಸ್ತ್ಯ ಮುನಿ ಸ್ಥಾಪಿತ ಕ್ಷೇತ್ರ ನಾಗರಹಳ್ಳಿ

19 rpt 02
Published on

ರಿಪ್ಪನ್‌ಪೇಟೆ: ಪುರಾಣ ಪ್ರಸಿದ್ಧ ಅಗಸ್ತ್ಯ ಮುನಿ ಸ್ಥಾಪಿತ ಹೊಸನಗರ ತಾಲೂಕು ನಾಗರಹಳ್ಳಿ ಕ್ಷೇತ್ರದ ಶ್ರೀ ನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಆ.21ರಂದು ನಾಗರಪಂಚಮಿ ಜಾತ್ರಾಮಹೋತ್ಸವ ನೆರವೇರಲಿದೆ.
ವರ್ಷಕ್ಕೆರಡು ಬಾರಿ ಜಾತ್ರೆ ನಡೆಯುವ ಸಂಪ್ರದಾಯ ರೂಢಿಯಲ್ಲಿರುವ ಶ್ರೀ ಸನ್ನಿಧಿಯಲ್ಲಿ ಮಳೆಗಾಲದ ಶ್ರಾವಣ ಮಾಸದಲ್ಲಿ ನಾಗರಪಂಚಮಿ ಹಾಗೂ ಚಳಿಗಾಲದ ಪುಷ್ಯಮಾಸದಲ್ಲಿ ಕೂಳೆ ಪಂಚಮಿ ಮಹೋತ್ಸವಗಳು ವಿಜೃಂಭಣೆಯಿಂದ ಜರುಗುತ್ತವೆ.
ನಾಲ್ಕು ಸಾವಿರ ವರ್ಷಗಳ ಹಿಂದಿನ ಐತಿಹ್ಯವಿದೆ. ನಾಗರಹಳ್ಳಿ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥವಾಗಿ ಅಗಸ್ತ್ಯ ಮಹಾಮುನಿಗಳು ಸದ್ಭಕ್ತರ ಪೊರೆಯುವಂತೆ ಪ್ರಾರ್ಥಿಸಿ, ಶ್ರೀ ನಾಗೇಂದ್ರಸ್ವಾಮಿಯ ಪ್ರತಿಷ್ಠಾಪನೆ ನೆರವೇರಿಸಿದರು ಎಂಬ ಪ್ರತೀತಿಯಿದೆ. ಅಂದಿನಿಂದ ಇಂದಿನವರೆಗೂ ಇಲ್ಲಿಗೆ ಕಷ್ಟವೆಂದು ಬೇಡಿ ಬರುವ ಭಕ್ತರ ಅಭೀಷ್ಟ ಈಡೇರಿಸುವ ಸ್ವಾಮಿಯಾಗಿ ನಾಗರಾಜ ಪ್ರಖ್ಯಾತಿ ಪಡೆದಿದ್ದಾನೆ.
ಶಿಲಾಮಯ ಗರ್ಭಗುಡಿಯಲ್ಲಿ ಎರಡೂ ಕೈಗಳಲ್ಲಿ ಪಾಶಾಂಕುಶವನ್ನು ಹಿಡಿದ ಪುರುಷರೂಪಿ ದೈವಗಣವನ್ನು ಸುತ್ತುವರಿದಿರುವ ಮಹಾಶೇಷ, ಸುತ್ತಲೂ 77 ಹೆಡೆಗಳ ನಾಗಪ್ರಭಾವಳಿಯನ್ನು ಸೃಷ್ಟಿಸಿಕೊಂಡು ದೈವದ ತಲೆ ಮೇಲೆ ತನ್ನ ಏಳು ಹೆಡೆಗಳನ್ನೆತ್ತಿ ಶಿರಭೂಷಣನಾಗಿರುವ ಸುಬ್ರಹ್ಮಣ್ಯ ಪಾಣಿಪೀಠದಲ್ಲಿ ವಿರಾಜಮಾನನಾಗಿದ್ದಾನೆ. ಇಂತಹ ಒಂದು ನಾಗರ ಆಕೃತಿಯನ್ನು ಕಾಣುವುದು ತೀರ ವಿರಳವಾಗಿದ್ದು ದೇಶಾದ್ಯಂತ ಇರುವ ಏಕೈಕ ವಿಗ್ರಹವೆಂದು ಹೇಳಲಾಗುತ್ತದೆ.
ಪುರಾತನ ಕಾಲದಿಂದಲೂ ನಿತ್ಯಪೂಜೆಯೊಂದಿಗೆ ಇತರ ನಾಗಾರಾಧನೆಯ ಪೂಜಾ ಕೈಂಕರ್ಯಗಳು ನಡೆದುಬಂದಿವೆ. ಸರ್ಪಶಾಂತಿ, ಸರ್ಪಸಂಸ್ಕಾರ, ಸರ್ಪದೋಷ, ಆಶ್ಲೇಷ ಬಲಿ, ಕಾಳಸರ್ಪ ದೋಷ, ತುಲಾಭಾರದ ಜತೆಗೆ ಪುಷ್ಪಾಲಂಕಾರ ಪೂಜೆಗಳು ಇಲ್ಲಿ ನೆರವೇರುತ್ತವೆ.
ಮೂಲನಾಗನ ಕ್ಷೇತ್ರವೆಂದು ಹೆಗ್ಗಳಿಕೆಯನ್ನು ಹೊಂದಿರುವ ನಾಗಸನ್ನಿಧಿಯು ವಿವಾಹ ಭಾಗ್ಯ, ಸಂತಾನಭಾಗ್ಯ, ಆರೋಗ್ಯಭಾಗ್ಯದೊಂದಿಗೆ ಸಕಲವನ್ನೂ ಕರುಣಿಸುವ ದೈವವಾಗಿದ್ದು ಸುಬ್ರಹ್ಮಣ್ಯಕ್ಕೆ ಹರಕೆ ಹೊತ್ತ ಭಕ್ತರು ಇಲ್ಲಿ ಹರಕೆ ತೀರಿಸಬಹುದಾಗಿದೆ. ಆದರೆ ಇಲ್ಲಿಗೆ ಹರಕೆ ಹೊತ್ತವರು ಬೇರೆಲ್ಲಿಯೂ ಸಲ್ಲದೆ ಇಲ್ಲಿಗೇ ಬಂದು ಹರಕೆ ತೀರಿಸಬೇಕೆಂಬುದು ಇಲ್ಲಿನ ವಿಶೇಷ.
ನಾಗೇಂದ್ರಸ್ವಾಮಿಯ ದೇವಸ್ಥಾನ ಪ್ರಖ್ಯಾತಿಯಿಂದಲೇ ಗ್ರಾಮಕ್ಕೆ ನಾಗರಹಳ್ಳಿ ಎಂಬ ಹೆಸರು ಅನ್ವರ್ಥವಾಗಿ ಬಂದಿದ್ದು ದೇವಾಲಯ ಕಳೆದ ಐವತ್ತು ವರ್ಷಗಳ ಹಿಂದೆಯೇ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ತಾಲೂಕು ಆಡಳಿತ ಹಾಗೂ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಆಶ್ರಯದಲ್ಲಿ ಸದಾಕಾಲ ನಾಗಾರಾಧನೆಯು ಸಾಂಪ್ರದಾಯಿಕವಾಗಿ ನಡೆಯುತ್ತಿದ್ದು ಹತ್ತಾರು ಸಾವಿರ ಭಕ್ತರು ಜಾತ್ರಾ ಮಹೋತ್ಸವಗಳಲ್ಲಿ ಭಾಗಿಯಾಗಿ ವಿಜೃಂಭಣೆಗೆ ಸಾಕ್ಷಿಯಾಗುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net