ಕ್ಷೇತ್ರಗಳನ್ನು ಮತ್ತೆ ವಶಪಡಿಸಿಕೊಳ್ಳಬೇಕು: ಪಕ್ಷದ ಮುಖಂಡರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು

3
Published on

ಮೈಸೂರು: ಕಾಂಗ್ರೆಸ್ ಕ್ಷೇತ್ರಗಳಾಗಿದ್ದ ಮೈಸೂರು-ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳನ್ನು ಮತ್ತೆ ಪಕ್ಷ ಗೆಲ್ಲಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಮುಖಂಡರಿಗೆ ತಾಕೀತು ಮಾಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯ ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಮುಖಂಡರು, ವಿವಿಧ ನಿಗಮ ಮಂಡಳಿ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಬೆಲೆ ಏರಿಕೆ ಕ್ರಮದಿಂದ ಸಂಕಷ್ಟಕ್ಕೆ ತುತ್ತಾಗಿದ್ದ ರಾಜ್ಯದ ಎಲ್ಲ ಕುಟುಂಬಗಳಿಗೆ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿಗಳು ನೆಮ್ಮದಿ ತರಿಸಿರುವುದನ್ನು ನಾಡಿನ ಜನತೆ ಹೃದಯಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ. ಹಾಗಾಗಿ ಈ ಬಾರಿ ಬಿಜೆಪಿ ಪರ ವಾತಾವರಣ ಇಲ್ಲ. ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಜೋರಾಗಿದೆ ಎಂದರು.
ನಾವು ನಡೆಸಿರುವ ಹಲವು ಸಮೀಕ್ಷೆಗಳಲ್ಲಿ ಮೈಸೂರು, ಚಾಮರಾಜನಗರ ಕ್ಷೇತ್ರಗಳು ಸೇರಿದಂತೆ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ ಎನ್ನುವ ವರದಿಗಳು ಬಂದಿವೆ. ಹೀಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಕಾಂಗ್ರೆಸ್ ಪರವಾದ ಅಭೂತಪೂರ್ವ ಫಲಿತಾಂಶ ಬರಲಿದೆ ಎಂದು ವಿಶ್ವಾಸದಿಂದ ನುಡಿದರು.
ಹತ್ತು ವರ್ಷ ಅಧಿಕಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಜನರಿಗೆ ತೋರಿಸಲು ಒಂದೇ ಒಂದು ಕೆಲಸವನ್ನೂ ಮಾಡಿಲ್ಲ. ಹೀಗಾಗಿ ಶ್ರೀರಾಮನ ಹೆಸರಲ್ಲಿ ಮತ ಕೇಳುವಂತಾಗಿದೆ. ರಾಮ ಸರ್ವರಿಗೂ ಸೇರಿದವನು. ಶ್ರೀರಾಮಚಂದ್ರ, ಸೀತಾ, ಲಕ್ಷ್ಮ್ಮಣ ಎಲ್ಲರೂ ನಮಗೆ ಪೂಜ್ಯರು ಎಂದರು.
ಈಗ ಬಿಜೆಪಿ ಕೇವಲ ಜೈ ಶ್ರೀರಾಮ್ ಕೂಗುತ್ತದೆ. ನಾವು ಜೈ ಸೀತಾರಾಮ್ ಎಂದು ನಿರಂತರವಾಗಿ ಕೂಗುತ್ತೇವೆ. ನನ್ನ ಹೆಸರಲ್ಲೇ ರಾಮ ಇದ್ದಾನೆ. ಹಾಗಾಗಿ ರಾಮನ ಹೆಸರಿನಲ್ಲಿ ಮತ ಕೇಳದೆ ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳಲು ಬಿಜೆಪಿಯವರಿಗೆ ಆಗುತ್ತಿಲ್ಲ ಎಂದು ದೂರಿದರು.
ಹತ್ತು ವರ್ಷ ಕೇಂದ್ರದಲ್ಲಿ ಅಧಿಕಾರ ನಡೆಸಿದ ಬಿಜೆಪಿಯವರಿಗೆ ಜನರ ಬಳಿ ಹೋಗಲು ಮುಖ ಇಲ್ಲ. ಬಿಜೆಪಿ ಅವಧಿಯಲ್ಲಿ ಸಾಮಾನ್ಯ ಜನರಿಗೆ ತೋರಿಸಲು ಒಂದೇ ಒಂದು ಕೆಲಸವನ್ನೂ ಮಾಡಿಲ್ಲ. ಅದಕ್ಕೇ ಕೇವಲ ಮೋದಿ ಅವರ ಮುಖ ತೋರಿಸಿ ಚುನಾವಣೆ ಮಾಡುತ್ತೇವೆ ಎಂದು ಬಿಜೆಪಿ ಹೆಣಗಾಡುತ್ತಿದೆ ಎಂದು ಟೀಕಿಸಿದರು.
ಹೀಗಾಗಿ ಬಿಜೆಪಿ ಸುಳ್ಳುಗಳ ಮೊರೆ ಹೋಗಿದೆ. ನನ್ನ ಬಗ್ಗೆ, ನಮ್ಮ ನಾಯಕರ ಬಗ್ಗೆ, ನಮ್ಮ ಪಕ್ಷದ ಬಗ್ಗೆ ಸರಣಿ ಸುಳ್ಳುಗಳನ್ನು ಹೇಳುತ್ತಾ, ಸುಳ್ಳುಗಳ ಆಧಾರದಲ್ಲೇ ಚುನಾವಣೆ ಮಾಡುತ್ತಿದೆ. ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಪ್ರಚಾರ ಮಾಡಿದ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ 50 ರಿಂದ 60 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದೆ ಎಂದರು.
ಸಮಾಜದಲ್ಲಿರುವ ಅಸಮಾನತೆ ಹೋಗಬೇಕು. ಆದರೆ ಬಿಜೆಪಿ ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದೆ. ಸಮಾಜದಲ್ಲಿ ಬಿರುಕು ಮೂಡಿದಷ್ಟೂ ಅಸಮಾನತೆ ಬೆಳೆಯುತ್ತದೆ. ನಮ್ಮ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳು ಎಲ್ಲ ಜಾತಿ, ಎಲ್ಲ ಧರ್ಮದವರಿಗೂ ಸಿಗುತ್ತಿದೆ. ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿ ಮತ್ತು ನರೇಂದ್ರ ಮೋದಿ ಹೇಳಿದ್ದರಲ್ಲಿ ಒಂದನ್ನೂ ಮಾಡಿಲ್ಲ ಎಂದು ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ, ಚಾ.ನಗರ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶ್ ಪ್ರಸಾದ್, ದರ್ಶನ್ ಧ್ರುವನಾರಾಯಣ, ಕೆ.ಹರೀಶ್‌ಗೌಡ, ಪೊನ್ನಣ್ಣ, ಮಾಜಿ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಜಯಣ್ಣ, ಆರ್.ನರೇಂದ್ರ, ಎಂ.ಕೆ.ಸೋಮಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮುಡಾ ಅಧ್ಯಕ್ಷ ಕೆ.ಮರೀಗೌಡ, ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net