

ಮಡಿಕೇರಿ: ನಗರಸಭೆಯಿಂದ ನಗರದ ನಿವಾಸಿಗಳಿಗೆ ಎರಡು ದಿನಗಳಿಂದ ಮಲ ಮಿಶ್ರಿತ ಕುಡಿಯುವ ನೀರನ್ನು ನಲ್ಲಿಯಲ್ಲಿ ಸರಬರಾಜು ಮಾಡಲಾಗುತ್ತಿದೆ.
ಮಡಿಕೇರಿ ನಗರಸಭೆ ನಗರದ ಎಲ್ಲ ಬಡಾವಣೆಗಳಿಗೆ ಕೂಟುಹೊಳೆಯಿಂದ ಪೂರೈಕೆಯಾಗುವ ನೀರನ್ನು ನಗರದ ಸ್ಟೋನ್ ಹಿಲ್ನಲ್ಲಿರುವ ನೀರು ಶುದ್ಧೀಕರಣ ಘಟಕದಿಂದ ಪೂರೈಕೆ ಮಾಡಲಾಗುತ್ತದೆ. ಆದರೆ ಕಳೆದ ಎರಡು ದಿನಗಳಿಂದ ನಗರದ ಹೊಸ ಬಡಾವಣೆ, ಗಣಪತಿ ಬೀದಿ, ರೇಸ್ ಕೋರ್ಸ್ ರಸ್ತೆ ನಿವಾಸಿಗಳಿಗೆ ಮಲ ಮಿಶ್ರಿತ ಕುಡಿಯುವ ನೀರನ್ನು ಪೂರೈಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕುತ್ತು ತಂದಪೈಪ್: ನಗರದಲ್ಲಿ 60 ವರ್ಷಗಳ ಹಿಂದೆ ಅಳವಡಿಸಿರುವ ನೀರು ಪೂರೈಕೆ ಪೈಪುಗಳು ಒಡೆದಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಇತ್ತೀಚೆಗೆ ನಗರದಲ್ಲಿ ನಡೆಯುತ್ತಿರುವ ಒಳಚರಂಡಿ, ಯುಜಿಡಿಯಂತಹ ಕಾಮಗಾರಿ ಸಂದರ್ಭದಲ್ಲಿ ಹಳೆಯ ಪೈಪ್‌ಗಳು ತುಂಡಾಗಿ ಮಲ ಮಿಶ್ರಿತ ನೀರು ಮನೆಗಳಿಗೆ ಪೂರೈಕೆಯಾಗಿದೆ ಎಂದು ಕಿರಿಯ ಅಭಿಯಂತರ ನಾಗರಾಜ್ ವಿಜಯವಾಣಿಗೆ ತಿಳಿಸಿದ್ದಾರೆ.
ಹೊಸ ಪೈಪ್ ಜೋಡಣೆ: ಟಾಯ್ಲೆಟ್ ಮಿಶ್ರಿತ ನೀರು ಎಲ್ಲಿಂದ ಮನೆಗಳಿಗೆ ಪೂರೈಕೆ ಆಗುತ್ತಿದೆ ಎಂಬುದನ್ನು ಪತ್ತೆಹಚ್ಚಿದ ನಗರಸಭೆ ಕಿರಿಯ ಅಭಿಯಂತರ ನಾಗರಾಜು ಪೈಪ್ ಲೈನ್ ಸರಿಪಡಿಸಿ ನೂತನ ಪೈಪ್ ಜೋಡಣೆಗೆ ಮುಂದಾಗಿದ್ದಾರೆ. ಈಗಾಗಲೇ ಎಚ್‌ಡಿಪಿ ಹೊಸ ಲೈನ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಬುಧವಾರ ಸಂಜೆಯೊಳಗೆ ಪೂರ್ಣಗೊಳ್ಳಲಿದೆ ಎಂದು ನಾಗರಾಜ್ ಮಾಹಿತಿ ನೀಡಿದ್ದಾರೆ.
2ನೇ ಬಾರಿ ಘಟನೆ: 2019ರ ಡಿಸೆಂಬರ್ ತಿಂಗಳಲ್ಲಿ ನಗರದ ಕೆಲವು ಬಡಾವಣೆಗಳಿಗೆ ಕಸಕಡ್ಡಿ, ಹುಳಹುಪ್ಪಟೆಯುಳ್ಳ ನೀರು ಸರಬರಾಜು ಆಗಿತ್ತು. ಈ ಸಂಬಂಧ ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ನಗರಸಭೆಗೆ ದೂರು ಕೂಡ ನೀಡಿತ್ತು. ಆ ನಂತರ ಸರಿಪಡಿಸಿ ಕಸದ ನೀರಿಗೆ ಮುಕ್ತಿ ಹಾಡಲಾಗಿತ್ತು.
ನಗರದಲ್ಲಿ ರಸ್ತೆ ಸಮಸ್ಯೆಯಿಂದ ಬಳಲುತ್ತಿದ್ದ ಜನತೆ ಇಂದು ಕುಡಿಯುವ ನೀರಿನಲ್ಲಿ ಮಲ ಮಿಶ್ರಿತ ನೀರು ಸರಬರಾಜು ಆದ ಹಿನ್ನೆಲೆ ನೀರಿನ ಬಳಕೆಗೆ ಹಿಂಜರಿಯುವಂತಾಗಿದೆ.
ಜಿಲ್ಲಾಧಿಕಾರಿಗಳಿಗೆ ಮಾಹಿತಿ ಇಲ್ಲ
ಎರಡು ದಿನಗಳಿಂದ ನಗರದ ಬಡಾವಣೆಗಳಲ್ಲಿ ಮಲ ಮಿಶ್ರಿತ ನೀರು ಸರಬರಾಜು ಆಗುತ್ತಿದ್ದರೂ ಕೂಡ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇಷ್ಟು ದೊಡ್ಡ ವಿಚಾರ ಜಿಲ್ಲಾಧಿಕಾರಿಗಳ ಗಮನಕ್ಕೆ ಬಾರದಿರುವುದು ದುರದೃಷ್ಟಕರ. ನಗರದ ರಸ್ತೆಗಳು ಒಂದೆಡೆ ಕಿತ್ತು ಬರುತ್ತಿವೆ. ಮತ್ತೊಂದೆಡೆ ನಗರಸಭೆ ಮಲಮಿಶ್ರಿತ ನೀರು ಸರಬರಾಜು ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
‘ಕುಡಿಯುವ ನೀರಿನಲ್ಲಿ ಮಲಮಿಶ್ರಿತವಾಗಿರುವ ಬಗ್ಗೆ ನನಗೆ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ’
ಅನೀಸ್ ಕಣ್ಮಣಿ ಜಾಯ್ ಜಿಲ್ಲಾಧಿಕಾರಿ
ಎರಡು ದಿನಗಳಿಂದ ನಮ್ಮ ಬಡಾವಣೆಗಳಿಗೆ ಮಲ ಮಿಶ್ರಿತ ನೀರು ಪೂರೈಕೆಯಾಗುತ್ತಿದೆ. ಇದರಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ನಗರಸಭೆ ಎಚ್ಚೆತ್ತುಕೊಂಡು ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು’
ಸತೀಶ್ ಪೈ ಹೊಸಬಡಾವಣೆ ನಿವಾಸಿ
2 ದಿನಗಳಿಂದ ನಗರದ ಹೊಸ ಬಡಾವಣೆ, ಗಣಪತಿ ಬೀದಿ, ರೇಸ್ ಕೋರ್ಸ್ ರಸ್ತೆ ನಿವಾಸಿಗಳಿಗೆ ಕಲುಷಿತ ನೀರು ಪೂರೈಕೆ ಆಗುತ್ತಿದೆ. ಈ ಸಂಬಂಧ ನಗರಸಭೆಯ ಅಭಿಯಂತರ ಗಮನಕ್ಕೆ ತರಲಾಗಿದ್ದು, ಹೊಸ ಪೈಪ್‌ಲೈನ್ ಅಳವಡಿಸಲಾಗುವುದೆಂದು ಭರವಸೆ ನೀಡಿದ್ದಾರೆ. ಶುದ್ಧ ನೀರು ಸರಬರಾಜು ಆಗದಿದ್ದಲ್ಲಿ ನಿವಾಸಿಗಳೊಂದಿಗೆ ನಗರಸಭೆ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’
ಜೆ.ರವಿಗೌಡ ಅಧ್ಯಕ್ಷರು, ಮಡಿಕೇರಿ ನಗರ ಹಿತರಕ್ಷಣ ವೇದಿಕೆ
ಚರಂಡಿ ಸ್ಲಾೃಬ್‌ನ ಒಳಗಿಂದ ಹಾದು ಹೋಗಿರುವ ನೀರು ಸರಬರಾಜು ಪೈಪ್ ಲೈನ್ ಒಡೆದು ಕಲುಷಿತ ನೀರು ಸರಬರಾಜಾಗಿದೆ. ಈ ಸಂಬಂಧ ಪರಿಶೀಲನೆ ಮಾಡಿ ಹೊಸ ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ಬುಧವಾರ ಸಂಜೆಯೊಳಗೆ ಪೂರ್ಣಗೊಳಿಸಿ ಶುದ್ಧ ನೀರು ಸರಬರಾಜು ಮಾಡಲಾಗುವುದು
ನಾಗರಾಜ್ ಕಿರಿಯ ಅಭಿಯಂತರರು, ನಗರಸಭೆ, ಮಡಿಕೇರಿ