ಮಡಿಕೇರಿ : ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನಿರಂತರ ಅಭ್ಯಾಸದ ಮೂಲಕ ಜ್ಞಾನ ಸಂಪಾದಿಸಿಕೊಂಡರೆ ಉನ್ನತ ಸ್ಥಾನ ಪಡೆಯಬಹುದು ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.
ಸೋಮವಾರಪೇಟೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಹಂತದಲ್ಲಿ ವಿವಿಧ ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸಿ, ಸಂವಹನ ಕಲೆಯನ್ನು ರೂಢಿಸಿಕೊಂಡರೆ ಪದವಿ ಹಾಗೂ ಸ್ನಾತಕೋತ್ತರ ವ್ಯಾಸಂಗ ಮಾಡುವ ಸಂದರ್ಭ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗುತ್ತದೆ. ಅಲ್ಲದೆ ನೌಕರಿ ಗಿಟ್ಟಿಸಲು ಸಹಾಯವಾಗುತ್ತದೆ ಎಂದು ಹೇಳಿದರು.
ನಿರಂತರ ಕಲಿಕೆಯಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಪ್ರತಿಯೊಬ್ಬರಲ್ಲೂ ನಾನಾ ತರಹದ ಪ್ರತಿಭೆಯಿರುತ್ತದೆ. ತಮ್ಮ ಪ್ರತಿಭೆಯನ್ನು ತೋರಿಸಲು ವಿವಿಧ ವಿಭಾಗಗಳಲ್ಲಿ ನಡೆಯುವ ಸ್ಪರ್ಧಾ ಕಾರ್ಯಕ್ರಮಗಳನ್ನು ಉಪಯೋಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮಲ್ಲೇ ಕೀಳರಿಮೆ ಬೆಳೆಸಿಕೊಂಡರೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಕಷ್ಟವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಆದರೆ ದತ್ತಿ ನಿಧಿಗೆ ಚಾಲನೆ: ಕಾಲೇಜು ಅಭಿವೃದ್ಧಿ ಸಮಿತಿ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಸ್ಥಾಪನೆ ಮಾಡಿರುವ ಆಸರೆ ಹೆಸರಿನ ದತ್ತಿ ನಿಧಿಗೆ ಶಾಸಕ ಡಾ.ಮಂತರ್‌ಗೌಡ ವಾರ್ಷಿಕ 20 ಸಾವಿರ ರೂ.ಗಳನ್ನು ನೀಡುವ ಮೂಲಕ ಚಾಲನೆ ನೀಡಿದರು. ಈಗಾಗಲೇ ದಾನಿಗಳು 1.50 ಲಕ್ಷ ರೂ.ನಷ್ಟು ನೀಡಿದ್ದಾರೆ ಎಂದು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವಿ.ಎ.ಲಾರೆನ್ಸ್ ಹೇಳಿದರು. ಮುಂದಿನ ಸಾಲಿನಿಂದ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ತೆರೆಯಲು ಚರ್ಚೆ ನಡೆದಿದೆ. ಇದಕ್ಕೆ ಶಾಸಕರು ಹೆಚ್ಚಿನ ಆಸಕ್ತಿ ತೋರಿದ್ದಾರೆ ಎಂದು ಹೇಳಿದರು.
ಸನ್ಮಾನ:ಪದವಿ ಪೂರ್ವ ಕಾಲೇಜು ಹಾಗೂ ಮಾದರಿ ಪ್ರಾಥಮಿಕ ಶಾಲೆಗೆ ಸುಮಾರು 13 ಎಕರೆ ಜಾಗವನ್ನು ದಾನ ಮಾಡಿದ ಚೌಡ್ಲು ಗ್ರಾಮದ ದಿ.ಸಿ.ಕೆ.ಕಾಳಪ್ಪ ಅವರ ಮೊಮ್ಮಗ ಸುಮೇಧಾ ರಾಘವ್ ಅವರನ್ನು ಸನ್ಮಾನಿಸಲಾಯಿತು. ಕಬಡ್ಡಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದ ಮಹಮ್ಮದ್ ಫೈಜ್, ಎಸ್.ಎಂ.ದರ್ಶನ್, ಅಬ್ದುಲ್ ರಾಜಿಕ್ ಅವರನ್ನು ಗೌರವಿಸಲಾಯಿತು.
ಶೈಕ್ಷಣಿಕ ಸಾಲಿನಲ್ಲಿ ಅಧಿಕ ಅಂಕ ಗಳಿಸಿದ ಎಂ.ಬಿಂದು, ಖತೀಜತ್ ಸಿರಿನ್‌ಶಾನ, ಸಿ.ವಿ.ರಶ್ಮಿ, ಧನುಷ್, ಕೆ.ಎಚ್.ಕಿರ್ತನ್ ಅವರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ವಿವಿಧ ವಿಭಾಗಗಳ ಪ್ರತಿಭಾವಂತ ವಿದ್ಯಾರ್ಥಿಗಳಾದ ಅಮಿಷಿತ್, ಸ್ನೇಹ, ಶಿಫಾ, ಕಿಶೋರ್ ಕುಮಾರ್, ನವನೀತ್, ಟಿಸ್ಮಾ, ಮೋನಿಕಾ, ವಿದ್ಯಾ, ಮದನ್ ಅವರಿಗೂ ಬಹುಮಾನ ನೀಡಲಾಯಿತು.
ಬಿಇಒ ಎಸ್.ಭಾಗ್ಯಮ್ಮ, ಕಾಲೇಜು ಪ್ರಾಂಶುಪಾಲ ಬಿ.ಎಂ.ಬೆಳ್ಳಿಯಪ್ಪ, ಪ್ರಭಾರ ಉಪ ಪ್ರಾಂಶುಪಾಲೆ ಹೇಮಲತಾ, ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜಾ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ.ಸೋಮಶೇಖರ್, ನಿವೃತ್ತ ಶಿಕ್ಷಕರಾದ ಎಚ್.ಎಂ.ರಮೇಶ್, ಜೆ.ಸಿ.ಶೇಖರ್, ವಕೀಲರಾದ ಎಚ್.ಸಿ.ನಾಗೇಶ್, ಬಿ.ಇ.ಜಯೇಂದ್ರ, ಮುಖಂಡರಾದ ಎಚ್.ಆರ್.ಸುರೇಶ್, ಉಪನ್ಯಾಸಕರಾದ ಎಂ.ಬಿ.ತಿಲೋತ್ತಮೆ, ಬಿ.ಬಿ.ಲಲಿತಾ, ಎಚ್.ಪಿ.ಸರಿತಾ, ಸುನಿತಾ ಕುಮಾರಿ, ಆರ್.ಎ.ಅಕ್ಷತಾ, ಎಚ್.ಡಿ.ಸಮಂತ್, ಆರ್.ಆರ್.ಪ್ರದೀಪ್ ಇದ್ದರು.