ಕನ್ನಡ ಶಾಲೆಗಳ ಉಳಿಸಲು ನಿರಂತರ ಶ್ರಮ

28-kolleaglphoto-1,,,,
ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ರವಿ ಸಂತು ಬಳಗದ ಸದಸ್ಯರು ಕನ್ನಡ ಪರ ಚಿಂತಕ ರೊನಾಲ್ಡ್ ಕೊಲಾಕೊ ಹುಟ್ಟುಹಬ್ಬ ಆಚರಣೆ ಪ್ರಯುಕ್ತ ಶಾಲೆ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದರು. ರವಿ ಸಂತು, ಮಂಗಳಮ್ಮ, ಚೆನ್ನೇಶ್, ಸುರೇಶ್ ಗೌಡ, ಉಮ್ಮತ್ತೂರು ಚಂದ್ರು, ಶ್ರೀಕಂಠ, ಕಿರಣ್, ಲೋಕೇಶ್, ಮಿಮಿಕ್ರಿ ಗೋಪಿ ಇತರರು ಇದ್ದರು.
Published on

ಕೊಳ್ಳೇಗಾಲ: ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಿರಂತರವಾಗಿ ರವಿ ಸಂತು ಬಳಗ ಶ್ರಮಿಸುತ್ತಿದೆ ಎಂದು ಸಂಘಟನೆ ಸದಸ್ಯ ರವಿ ಸಂತು ಹೇಳಿದರು.

ತಾಲೂಕಿನ ಕುಣಗಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ರವಿ ಸಂತು ಬಳಗದ ವತಿಯಿಂದ ಕನ್ನಡ ಪರ ಚಿಂತಕ ರೊನಾಲ್ಡ್ ಕೊಲಾಕೊ ಹುಟ್ಟುಹಬ್ಬ ಆಚರಣೆ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಪರಿಕರ ವಿತರಣೆ ಮಾಡಿ ಮಾತನಾಡಿದರು.

ಮಾತೃಭಾಷೆ ಕನ್ನಡ ನಮ್ಮ ಅಸ್ತಿತ್ವ. ನಮ್ಮ ಭಾಷೆ ನಮ್ಮ ಹೆಮ್ಮೆ. ನಾವೆಂದಿಗೂ ಕನ್ನಡವನ್ನು ಬಿಟ್ಟು ಕೊಡಬಾರದು. ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಕಲಿಕೆಗಾಗಿ ಇತರ ಭಾಷೆಗಳನ್ನು ಕಲಿಯಬೇಕು. ಕನ್ನಡ ಭಾಷೆ ಶುದ್ಧವಾದ ಭಾಷೆಯಾಗಿದೆ. ಸಾವಿರಾರು ವರ್ಷಗಳ ಇತಿಹಾಸವಿದೆ ಎಂದರು.

ಸರ್ಕಾರಿ ಶಾಲೆಗಳ ಮಕ್ಕಳಿಗೆ ಎಲ್ಲ ಸೌಕರ್ಯಗಳು ಶಾಲೆಯಲ್ಲಿ ದೊರೆಯಬೇಕೆಂಬ ಉದ್ದೇಶದಡಿ ಪರಿಕರಗಳನ್ನು ರವಿ ಸಂತು ಬಳಗ ವಿತರಿಸಿದೆ.ಸರ್ಕಾರಿ ಶಾಲೆಯ ಅಭಿವೃದ್ಧಿಗೆ ದಾನಿಗಳು ಮುಂದು ಬರಬೇಕು. ಇದ್ದರಿಂದ ಬಡ ಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಹಾಸ್ಯ ಕಲಾವಿದ ಮಿಮಿಕ್ರಿ ಗೋಪಿ ಮಾತನಾಡಿ, ನನ್ನೂರು ಕುಣಗಳ್ಳಿ ಎಂಬುದು ನನ್ನ ಹೆಮ್ಮೆ. ರವಿ ಸಂತು ಸಾಫ್ಟ್‌ವೇರ್ ಉದ್ಯೋಗಿ ಆಗಿದ್ದಾರೆ. ಆದರೆ, ತಮ್ಮ ಸಂಪಾದನೆಯಲ್ಲಿ ತಮ್ಮ ಸ್ನೇಹಿತರೊಟ್ಟಿಗೆ ಸೇರಿ ಸಮಾಜ ಸೇವೆ ಮಾಡುತ್ತಿದ್ದಾರೆ. ನಿರಂತರವಾಗಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಕಲ ಸೌಕರ್ಯ ಒದಗಿಸಬೇಕೆಂದು ಅಗತ್ಯ ಪರಿಕರಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

ಹಿಂದೆ ನಾವು ಓದುವಾಗ ಯಾವುದೇ ಸೌಲಭ್ಯಗಳಿರಲಿಲ್ಲ. ಕಷ್ಟದ ಪರಿಸ್ಥಿತಿಯಲ್ಲಿ ಓದಿದ್ದೇವೆ. ಇದೀಗ ಸರ್ಕಾರ ಊಟ, ಮೊಟ್ಟೆ, ಸಮವಸ್ತ್ರ, ಶೂ ನೀಡುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬಳಗದಿಂದ ಶಾಲೆಗೆ ಕಂಪ್ಯೂಟರ್, ವಾಟರ್ ಪ್ಯೂರಿಫೈಯರ್, ಕ್ರೀಡಾ ಸಾಮಗ್ರಿಗಳು, ಪ್ರಿಂಟರ್, ಡಿಕ್ಷನರಿ ಇತ್ಯಾದಿ ಪರಿಕರಗಳನ್ನು ವಿತರಣೆ ಮಾಡಿದರು. ಮುಖ್ಯ ಶಿಕ್ಷಕ, ಸಹ ಶಿಕ್ಷಕರು ಹಾಗೂ ಶಿಕ್ಷಕರಿಗೆ ರಾಜ್ಯ ಸೇವಾ ರತ್ನ ಪ್ರಶಸ್ತಿಯನ್ನು ರವಿ ಸಂತು ಬಳಗದ ವತಿಯಿಂದ ನೀಡಿ ಸನ್ಮಾನಿಸಲಾಯಿತು.

ಕುಣಗಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೆನ್ನೇಶ್, ಕುಣಗಳ್ಳಿ ಗ್ರಾ.ಪಂ.ಅಧ್ಯಕ್ಷೆ ಮಂಗಳಮ್ಮ, ರವಿ ಸಂತು ಬಳಗದ ಉಮ್ಮತ್ತೂರು ಚಂದ್ರು, ಸುರೇಶ್‌ಗೌಡ, ಶ್ರೀಕಂಠ, ಕಿರಣ್, ಲೋಕೇಶ್, ಚಂದ್ರು, ಶ್ರೀನಿವಾಸ್, ರವಿ ಹಂಸಲೇಖ, ಸಿಂಚನಾ, ಅನುಭವ್ಯ, ನಾಗಶ್ರೀ, ಶ್ವೇತಾ, ಪದ್ಮ, ವಾಣಿಶ್ರೀ, ಮುಖ್ಯಶಿಕ್ಷಕ ರಾಜಣ್ಣ, ಗ್ರಾಮದ ಮುಖಂಡ ರಾಜೇಶ್, ಸತೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net