ರಾಜಕೀಯ ಅಧಿಕಾರ ಪ್ರಭಾವ ಬೀರಿ ಹಣ ಸುಲಿಗೆ, ದಂಧೆಯ ನಿರಂತರ ಚರ್ಚೆ

09988
Published on

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಗಣಿಗಾರಿಕೆಯ ನಡೆಯುತ್ತಿರುವ ನಡುವೆ ಕ್ರಷರ್, ಕ್ವಾರಿಗಳ ಮೇಲೆ ರಾಜಕೀಯ, ಅಧಿಕಾರ ಪ್ರಭಾವ ಬೀರಿ ಹಣ ಸುಲಿಗೆ ದಂಧೆಯು ನಿರಂತರವಾಗಿ ಚರ್ಚೆಯಾಗುತ್ತಿದೆ.

ಹೌದು! ಹಿಂದೆ ಅಕ್ರಮ ಗಣಿಗಾರಿಕೆಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸುತ್ತಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳದಿರುವ ಸಂದರ್ಭದಲ್ಲಿ ಸಾಮಾನ್ಯ ಜನರು, ಕಮೀಷನ್ ವ್ಯವಹಾರಗಳಿಂದ ತಟಸ್ಥ ಧೋರಣೆ ತೋರಲಾಗುತ್ತಿದೆ ಎಂದೇಳುತ್ತಿದ್ದರು. ಆದರೆ, ಈಗ ಜನಪ್ರತಿನಿಧಿಗಳೇ ಬಹಿರಂಗವಾಗಿ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್, ಶಾಸಕ ಪ್ರದಿಪ್ ಈಶ್ವರ್ ಸೇರಿದಂತೆ ಹಲವರು ಗಣಿ ಕಮೀಷನ್ ಬಗ್ಗೆ ಧ್ವನಿ ಎತ್ತಿದ್ದರು. ತಿಂಗಳಿಗೆ ಇಷ್ಟು ಹಣ ಅಂತಾ ಪಡೆದು, ಪ್ರಕೃತಿ ಸಂಪತ್ತನ್ನು ಲೂಟಿ ಹೊಡೆಯಲು ಕುಮ್ಮಕ್ಕು ನೀಡಲಾಗುತ್ತಿದೆ. ಕ್ಷೇತ್ರದಲ್ಲಿ ಡಾ ಕೆ.ಸುಧಾಕರ್ ಭ್ರಷ್ಟಾಚಾರ, ಅವ್ಯವಹಾರಗಳನ್ನು ಬಹಿರಂಗಪಡಿಸಲಾಗುತ್ತದೆ ಎಂಬುದಾಗಿ ಹೇಳಿದ್ದರು. ಇದೀಗ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ವಿರುದ್ಧ ಸ್ವತ@ ಸಂಸದ ಡಾ ಕೆ.ಸುಧಾಕರ್ ಆರೋಪಿಸುತ್ತಿದ್ದಾರೆ.

ಹೊಸ ವರ್ಷ ಉಡುಗೋರೆಯ ನೆಪದಲ್ಲಿ ಚಿಕ್ಕಬಳ್ಳಾಪುರದ ಪ್ರತಿ ಕ್ವಾರಿ, ಕ್ರಷರ್ ಗಳಿಂದ ತಲಾ 10 ಲಕ್ಷ ರೂಗಳಂತೆ 12 ಕೋಟಿ ರೂ ವಸೂಲಿ ಮಾಡಲಾಗಿದೆ ಎಂಬುದಾಗಿ ಆರೋಪಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಸತ್ಯಹರಿಶ್ಚಂದ್ರರಂತೆ ಮಾತನಾಡುವವರ ಅಧಿಕಾರಾವಧಿಯಲ್ಲಿ ಎಷ್ಟೆಷ್ಟು ವಸೂಲಿಯಾಗುತ್ತಿದೆ ಗೊತ್ತೆ? ಎಂದು ಪ್ರಶ್ನಿಸಿದ್ದಾರೆ.

*ಅಕ್ಷಯ ಪಾತ್ರೆಯ ಗಣಿಗಳು

ಬೆಂಗಳೂರಿಗೆ ಸಮೀಪದಲ್ಲಿರುವ ಜಿಲ್ಲೆಯಲ್ಲಿ ಗಣಿಗಾರಿಕೆಯು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಪ್ರಭಾವಿ ನಾಯಕರು, ಅದರಲ್ಲೂ ಆಂಧ್ರದ ಉದ್ಯಮಿಗಳು ರಾಜಕೀಯ, ಆರ್ಥಿಕ ಪ್ರಭಾವ ಬೀರಿ ಗುತ್ತಿಗೆಯನ್ನು ಪಡೆದುಕೊಂಡಿದ್ದಾರೆ. ಇಲ್ಲಿ ನಿಯಮಬಾಹಿರವಾಗಿ ಕ್ರಷರ್ಗಳಲ್ಲಿ ಸ್ಫೋಟ, ಕಲ್ಲುಗಳ ಓವರ್ ಲೋಡ್ ಸಾಗಾಣೆ, ಪರವಾನಗಿ ಇಲ್ಲದೇ ಟಿಪ್ಪರ್ ಲಾರಿಗಳ ಸಂಚಾರ ಸೇರಿದಂತೆ ಅಕ್ರಮ ಹಲವು ವ್ಯವಹಾರಗಳೇ ಹೆಚ್ಚು. ಇದು ಇಲ್ಲಿನ ಕೆಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಲಾಭ ತಂದುಕೊಡುವ ಅಕ್ಷಯ ಪಾತ್ರೆಯಾಗಿದೆ.

ಇಲ್ಲಿ ಭ್ರಷ್ಟಾಚಾರದಲ್ಲಿ ತಿಂದು ತೇಗಿದ್ದ ಗಣಿ ಭೂ ವಿಜ್ಞಾನಿ ಅಧಿಕಾರಿಯೊಬ್ಬರನ್ನು ಎತ್ತಂಗಡಿ ಮಾಡಿದಾಗ ಸರ್ಕಾರದ ಆದೇಶದ ವಿರುದ್ಧವೇ ವರ್ಗಾವಣೆ ರದ್ದುಗೊಳಿಸಲು ನ್ಯಾಯಾಲಯ ಮೆಟ್ಟಿಲೇರಲಾಗಿತ್ತು. ಇದಕ್ಕೆ ಕಾಲ ಕಾಲಕ್ಕೆ ಸಿಗುತ್ತಿದ್ದ ದುಬಾರಿ ಲಾಭವನ್ನು ಬಿಟ್ಟು ಕೊಡಲು ಮನಸ್ಸಾಗದಿರುವುದು ಎನ್ನಲಾಗಿದ್ದು ಕೊನೆಗೆ ಆ ಅಧಿಕಾರಿ ಮನೆಯ ಮೇಲೆ ಲೋಕಾಯುಕ್ತರು ದಾಳಿ ನಡೆಸಿ, ಅಪಾರ ಪ್ರಮಾಣದಲ್ಲಿ ಹಣ, ಒಡವೆ, ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

*ನಿರಂತರ ಗಣಿ ಅವಡಗಳು

ನಿರಂತರ ಗಣಿಗಾರಿಕೆ ವ್ಯವಹಾರದಿಂದ ಪರಿಸರ, ರಸ್ತೆಗಳು ಹಾಳಾಗುತ್ತಿರುವುದರ ನಡುವೆ ಅವಡಗಳು ಸಂಭವಿಸುತ್ತಿವೆ. ಹಿಂದೆ ಹಿರೇನಾಗವಲ್ಲಿ ಕ್ರಷರ್ನಲ್ಲಿ ಜಿಲೇಟಿನ್ ಕಡ್ಡಿ ಸ್ಫೋಟಗೊಂಡು 6 ಕಾರ್ಮಿಕರು ಮೃತಪಟ್ಟಿದ್ದರು. ಕಳೆದ 1 ವರ್ಷದಲ್ಲಿ ಟಿಪ್ಪರ್ ಲಾರಿಗೆ 10 ಜನ ಬಲಿಯಾಗಿದ್ದಾರೆ. 50 ಕ್ಕೂ ಹೆಚ್ಚು ಜನ ಗಭೀರವಾಗಿ ಗಾಯಗೊಂಡಿದ್ದಾರೆ.

*ಅಭಿವೃದ್ಧಿ ನೆಪ, ಆದಾಯ ಸೋರಿಕೆ

ಜಿಲ್ಲೆಗೆ ಗಣಿಗಾರಿಕೆಯಿಂದ ಕಳೆದ 2020-21 ರಲ್ಲಿ 62 ಕೋಟಿ ರೂ, 2021-22 ರಲ್ಲಿ ಮತ್ತು 2022-23 ರಲ್ಲಿ ತಲಾ 80 ಕೋಟಿ ರೂ, 2023-24 ರಲ್ಲಿ 95 ಕೋಟಿ ರೂ ವಸೂಲಿಯ ವಾರ್ಷಿಕ ಗುರಿ ಹೊಂದಲಾಗಿತ್ತು. ಈ ಪೈಕಿ ವಸೂಲಿಯಲ್ಲಿ ಶೇ.80 ರಷ್ಟು ಸಾಧನೆ ಕಂಡು ಬರುತ್ತಿದೆ. ಇದರಡಿ ಸಂಗ್ರಹವಾದ ಹಣದಲ್ಲಿ ಖನಿತ ಪ್ರತಿಷ್ಠಾನ ನಿಧಿ ಯೋಜನೆಯಡಿ ಶಾಲೆಗಳ ಅಭಿವೃದ್ಧಿ, ನೈರ್ಮಲ್ಯ ನಿರ್ವಹಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ನಡುವೆ ಆದಾಯ ಸೋರಿಕೆಯು ಹೆಚ್ಚು. ಕಂದಾಯ, ಪೊಲೀಸ್, ಗಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಗಣಿ ಮಾಲೀಕರು ಕಾಲ ಕಾಲಕ್ಕೆ ನಿಭಾಯಿಸಿಕೊಂಡು ಹೋಗಬೇಕು. ಕಾಲ ಕಾಲಕ್ಕೆ ಕಮೀಷನ್ ಕೊಟ್ಟರೆ ನಿಯಮ ಬಾಹಿರ ವ್ಯವಹಾರ ದೂರುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಪಾಲು ಇಲ್ಲದಿದ್ದಲ್ಲಿ ಅಕ್ರಮ ಗಣಿಗಾರಿಕೆಯ ಬಗ್ಗೆ ಧ್ವನಿ ಎತ್ತಲಾಗುತ್ತದೆ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net