ಕರ್ತವ್ಯಲೋಪದಡಿ ಕಾನ್‌ಸ್ಟೇಬಲ್ ಅಮಾನತು

WEB LOGO
Published on

ಯಲ್ಲಾಪುರ: ಕರ್ತವ್ಯಲೋಪದಡಿ ಪಟ್ಟಣ ಠಾಣೆಯ ಕಾನ್‌ಸ್ಟೇಬಲ್ ಬೆನಕ ನಾಯಕ ಅವರನ್ನು ಅಮಾನತುಗೊಳಿಸಿ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಆದೇಶ ಹೊರಡಿಸಿದ್ದಾರೆ.

ಮಾರ್ಚ್ 6ರ ರಾತ್ರಿ ಯಲ್ಲಾಪುರದ ಅರಬೈಲ್ನಿಂದ ಕಿರವತ್ತಿಯವರೆಗೆ ಹೆದ್ದಾರಿ ಅಂಚಿನ ಚಹಾ ಅಂಗಡಿಗಳು ತೆರೆದಿರುವ ಬಗ್ಗೆ ಪೊಲೀಸ್ ಅಧೀಕ್ಷಕ ಎಂ.ನಾರಾಯಣ ಅವರಿಗೆ ಮಾಹಿತಿ ಬಂದಿತ್ತು. ಹೆದ್ದಾರಿಯ ಎರಡೂ ಬದಿ ಲಾರಿಗಳು ನಿಂತಿರುವುದರಿಂದ ವಾಹನ ದಟ್ಟಣೆಯ ಸಮಸ್ಯೆಯಾಗುವ ಬಗ್ಗೆ ಅರಿತ ಅವರು ತಪಾಸಣೆಗಾಗಿ ಸಿದ್ದಾಪುರದ ಸಿಪಿಐ ಜೆ.ಬಿ. ಸೀತಾರಾಮ ಅವರನ್ನು ಕಳುಹಿಸಿದ್ದರು.

ಕಿರವತ್ತಿಯವರೆಗೂ ತೆರಳಿ ಅಲ್ಲಿನ ತಪಾಸಣೆ ಕೇಂದ್ರವನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಶಿರಸಿ ಉಪ ವಿಭಾಗದ ಗಸ್ತು ಕರ್ತವ್ಯದ ಮೇಲಾಧಿಕಾರಿಯಾಗಿರುವ ಸೀತಾರಾಮ ಅವರು ಮಾರ್ಚ 6ರ ಸಂಜೆ ಯಲ್ಲಾಪುರಕ್ಕೆ ಆಗಮಿಸಿದರು. ರಾತ್ರಿಯಿಡಿ ಗಸ್ತು ತಿರುಗಿದ ಅವರು ಎಚ್‌ಆರ್‌ಪಿ ವಾಹನ ಸಂಚಾರವಿಲ್ಲದಿರುವ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು.

ಮಾರ್ಚ 7ರ ನಸುಕಿನ 4.30ಕ್ಕೆ ಯಲ್ಲಾಪುರ ಪಟ್ಟಣದಲ್ಲಿ ಸಂಚರಿಸಿ, ನಂತರ ಕಿರವತ್ತಿ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿದರು. ಕೇಂದ್ರದಲ್ಲಿ ಯಾವುದೇ ಅಧಿಕಾರಿ-ಸಿಬ್ಬಂದಿ ಕಾಣಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಯಲ್ಲಾಪುರ ಠಾಣೆಯ ಸಿಬ್ಬಂದಿ ಬೆನಕಾ ಆರ್ ನಾಯಕ ಅವರನ್ನು ಅಲ್ಲಿ ಕರ್ತವ್ಯಕ್ಕೆ ನಿಯೋಜಿಸಿರುವುದು ಗೊತ್ತಾಯಿತು. ಆದರೆ, ಅವರ ಸಂಪರ್ಕ ಸಾಧ್ಯವಾಗಲಿಲ್ಲ.

ನಿಯೋಜಿಸಿದ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿರದ ಬಗ್ಗೆ ವರದಿ ಸಲ್ಲಿಸಿದರು. ವರದಿ ಹಿನ್ನಲೆಯಲ್ಲಿ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net