ಮಾಯಾ-ಕಾರ್ಖಾನಾ ಗ್ಯಾಂಗ್ ಜಂಟಿ ಕೃತ್ಯ ಹೆಡ್‌ಕಾನ್‌ಸ್ಟೇಬಲ್ ಕೊಲೆ ಯತ್ನ ಪ್ರಕರಣ

crime
Published on

ಮಂಗಳೂರು: ಗೋಲಿಬಾರ್‌ಗೆ ಪ್ರತೀಕಾರವಾಗಿ ನಗರದ ಬಂದರು ಠಾಣೆ ಹೆಡ್‌ಕಾನ್‌ಸ್ಟೇಬಲ್ ಗಣೇಶ್ ಕಾಮತ್ ಅವರಿಗೆ ಡಿ.17ರಂದು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ಇನ್ನೊಂದು ಗ್ಯಾಂಗನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಮಾಯಾ ಗ್ಯಾಂಗ್‌ನ 8 ಮಂದಿಯನ್ನು ಈ ಮೊದಲು ಬಂಧಿಸಲಾಗಿತ್ತು. ಈಗ ಕಾರ್ಖಾನಾ ಗ್ಯಾಂಗ್‌ನ ಬೋಳಾರದ ಇಬ್ರಾಹಿಂ ಶಾಕೀರ್(19), ಕುದ್ರೋಳಿ ನಿವಾಸಿಗಳಾದ ಅಕ್ಬರ್(30), ಮೊಹಮ್ಮದ್ ಹನೀಫ್(32) ಎಂಬವರನ್ನು ಬಂಧಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ 11ಕ್ಕೇರಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದರಲ್ಲಿ ಓರ್ವ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ಉಳಿದವರ ಬಗ್ಗೆ ತನಿಖೆ ನಡೆಯುತ್ತಿದೆ. ಬಂಧನದಲ್ಲಿರುವ ನವಾಜ್ ಮತ್ತು ಮಹಮ್ಮದ್ ಖಾಯಿಸ್ ಎಂಬುವರು ಎರಡು ಗ್ಯಾಂಗ್‌ಗಳ ನಡುವೆ ಸಂಪರ್ಕ ಕೊಂಡಿಯಾಗಿದ್ದರು.

ವ್ಯವಸ್ಥಿತವಾಗಿ ಸಂಚು: ಪೊಲೀಸರ ಮೇಲೆ ದಾಳಿ ನಡೆಸಿದ ಬಳಿಕ ಯಾವ ಹಂತದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಸೂಚನೆಯನ್ನು ವ್ಯವಸ್ಥಿತವಾಗಿ ಕೆಲವರು ನೀಡಿದ್ದಾರೆ. ಯಾರೇ ಪೊಲೀಸರು ಸಿಕ್ಕಿದರೂ ಅವರ ಮೇಲೆ ದಾಳಿ ಮಾಡಲು ಸಂಚು ರೂಪಿಸಲಾಗಿತ್ತು. ನಗರದಲ್ಲಿ ಸಾಮಾನ್ಯವಾಗಿ ಒಬ್ಬರು ಪೊಲೀಸರು ಮಾತ್ರ ಕರ್ತವ್ಯದಲ್ಲಿರುವ 3-4 ಸ್ಥಳಗಳನ್ನು ಗುರುತಿಸಲಾಗಿತ್ತು.

ಬಂಧನವಾದಾಗ ಏನು ಹೇಳಬೇಕು, ಜೈಲಿಗೆ ಹೋದಾಗ ಯಾವ ಕೊಠಡಿಯಲ್ಲಿ ಯಾರ ಜತೆ ಇರಬೇಕು ಎಂಬಿತ್ಯಾದಿಯಾಗಿ ಆರೋಪಿಗಳಿಗೆ ಸೂಚನೆ ನೀಡಿರುವುದು ಗೊತ್ತಾಗಿದೆ. ಅಲ್ಲದೆ ಮಾರಕಾಯುಧಗಳ ಬಗ್ಗೆಯೂ ಮಾಹಿತಿ ದೊರೆತಿದೆ. ಆರೋಪಿಗಳಿಗೆ ಹಣಕಾಸು ಹಾಗೂ ಇತರ ನೆರವು ನೀಡಿರುವುದರ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ಆಯುಕ್ತರು ತಿಳಿಸಿದರು.

ಇದೊಂದು ವಿಶಿಷ್ಟ ಮತ್ತು ಗಂಭೀರ ಪ್ರಕರಣ. ಅಗತ್ಯ ಸಾಕ್ಷಾೃಧಾರಗಳನ್ನು ಸಂಗ್ರಹಿಸಿಯೇ ಆರೋಪಿಗಳ ಬಂಧನ, ತನಿಖೆ ನಡೆಸಲಾಗುತ್ತಿದೆ. ಸಿಐಡಿ ಅಥವಾ ಇತರೆ ತನಿಖಾ ತಂಡಗಳಿಗೆ ಪ್ರಕರಣ ಒಪ್ಪಿಸುವ ಬಗ್ಗೆ ಸದ್ಯಕ್ಕೆ ತೀರ್ಮಾನಿಸಿಲ್ಲ ಎಂದು ಹೇಳಿದರು.

ಗ್ಯಾಂಗ್ ಹೆಸರಿನ ಹಿಂದೆ: ಕುದ್ರೋಳಿ ಬಳಿಯ ‘ಕಾರ್ಖಾನಾ’ ಎಂಬ ಪ್ರದೇಶದಲ್ಲಿ ಹುಟ್ಟಿಕೊಂಡಿರುವ ಈ ಗ್ಯಾಂಗ್‌ನಲ್ಲಿ 25-40 ವರ್ಷ ವಯಸ್ಸಿನವರು ತೊಡಗಿಸಿಕೊಂಡಿದ್ದಾರೆ. ಇವರು ಬೇರೆ ಬೇರೆ ಚಟುವಟಿಕೆ, ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಇವರ ಬೆಂಬಲಿಗರು, ಸಲಹೆ ನೀಡುವವರು ಕೂಡ ಅನೇಕ ಮಂದಿ ಇದ್ದಾರೆ ಎಂಬುದು ಗೊತ್ತಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ದುರ್ವರ್ತನೆ ತೋರಿದರೆ ಕ್ರಮ: ಸಾರ್ವಜನಿಕರ ಆಸ್ತಿಪಾಸ್ತಿ, ಪ್ರಾಣ ರಕ್ಷಣೆ, ಕಾನೂನು ಸುವ್ಯವಸ್ಥೆಗಾಗಿ ಅವಿರತವಾಗಿ ಶ್ರಮಿಸುವ ಪೊಲೀಸರ ಮೇಲಿನ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದೆ ಧೈರ್ಯದಿಂದ ಕೆಲಸ ಮಾಡಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟವಾಗಬಹುದು. ಹಾಗಾಗಿ ಪೊಲೀಸರಿಗೆ ಹಲ್ಲೆ, ದುರ್ವರ್ತನೆ ತೋರುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪೊಲೀಸರಿಂದ ತಪ್ಪುಗಳಾದಾಗ ಮೇಲಧಿಕಾರಿಗಳ ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net