ಐಮಂಗಲದಲ್ಲಿ ಪೇದೆಗಳ ನಿರ್ಗಮನ ಪಥಸಂಚಲನ

232
Published on

ಐಮಂಗಲ (ಚಿತ್ರದುರ್ಗ): ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಮಹತ್ತರ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ ಎಂದು ದಾವಣಗೆರೆ ಪೂರ್ವವಲಯ ಪೊಲೀಸ್ ಮಹಾ ನಿರೀಕ್ಷಕ ಬಿ.ರಮೇಶ್ ಹೇಳಿದರು.

ಗ್ರಾಮದ ಪೊಲೀಸ್ ತರಬೇತಿ ಶಾಲಾ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ 8ನೇ ತಂಡ ನಾಗರಿಕ, ಸಶಸ್ತ್ರ ಹಾಗೂ ಕಾರಾಗೃಹ ಪೇದೆಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪೊಲೀಸ್ ತರಬೇತಿಯ ಅವಧಿಯಲ್ಲಿ ಗುಣಮಟ್ಟ ತರಬೇತಿ ನೀಡಲಾಗಿದ್ದು, ಇಲ್ಲಿ ಪಡೆದಿರುವ ಜ್ಞಾನವನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು ಇಲಾಖೆ ಮತ್ತು ಕುಟುಂಬಕ್ಕೆ ಗೌರವ ತರುವ ಕೆಲಸ ಮಾಡಬೇಕು. ಪೊಲೀಸ್ ವೃತ್ತಿ ಎಂಬುದು ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುವ ಇಲಾಖೆಯಾಗಿದ್ದು, ಕರ್ತವ್ಯನಿಷ್ಠೆ ಜತೆ ಆರೋಗ್ಯದ ಕಡೆಯೂ ಗಮನ ನೀಡಬೇಕೆಂದರು.

ಎಲ್ಲ ಕ್ಷೇತ್ರಗಳಲ್ಲಿ ಆಧುನೀಕತೆ ಪ್ರವೇಶಿಸಿದೆ. ಅಧ್ಯಯನ, ಹೊಸ ವಿಚಾರಗಳನ್ನು ತಿಳಿದುಕೊಂಡು ಉತ್ತಮವಾಗಿ ಕೆಲಸ ಮಾಡಲು ಮುಂದಾಗಬೇಕು. ಸದಾ ಅಧ್ಯಯನಶೀಲರಾಗಬೇಕು ಎಂದು ತಿಳಿಸಿದರು.

ನಮ್ಮ ವೃತ್ತಿ ಕುರಿತು ಅಭಿಮಾನ ಹೊಂದಿರಬೇಕು. ಜತೆಗೆ ಖಾಕಿ ಬಟ್ಟೆಗೆ ಜನ ಗೌರವ ನೀಡಬೇಕಾದರೆ, ನೀವುಗಳು ಆರೋಗ್ಯವಾಗಿರಬೇಕಾದರೆ ಬೊಜ್ಜು ರಹಿತ, ದೃಢದೇಹ ಅಗತ್ಯ. ಆದ್ದರಿಂದ ನಿತ್ಯ ವ್ಯಾಯಾಮ ಮಾಡಬೇಕು ಎಂದರು.

ಮುಖ್ಯ ಅಥಿತಿಗಳನ್ನು ಬೈಕ್ ರ‌್ಯಾಲಿಯ ಮೂಲಕ ವೇದಿಕೆಗೆ ಕರೆತರಲಾಯಿತು. ನಿರ್ಗಮನ ಪಥ ಸಂಚಲನದ ಹಿನ್ನೆಲೆಯಲ್ಲಿ ಬಣ್ಣ ಬಣ್ಣದ ಬಾವುಟ, ಹೂವು, ಬಾಳೆಕಂದು ಕಟ್ಟಿ ಚಿತ್ತಾರದ ರಂಗೋಲಿಗಳ ಮೂಲಕ ತರಬೇತಿ ಶಾಲೆ ಮತ್ತು ಮೈದಾನವನ್ನು ಸಿಂಗಾರ ಮಾಡಲಾಗಿತ್ತು.

ಶ್ವೇತ ವರ್ಣದ ಹಾಗೂ ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ತೆರೆದ ಜೀಪಿನಲ್ಲಿ ಮುಖ್ಯಅಥಿತಿಗಳು ಪರಿವೀಕ್ಷಣೆ ಮಾಡಿ ಪ್ರಶಿಕ್ಷಣಾರ್ಥಿಗಳಿಂದ ಗೌರವವಂಧನೆ ಸ್ವೀಕರಿಸಿದರು.

ತರಬೇತಿ ಪೂರ್ಣಗೊಳಿಸಿದ ಪೇದೆಗಳಿಗೆ ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯ ಪಿ.ಪಾಪಣ್ಣ ಪ್ರತಿಜ್ಞಾವಿಧಿ ಬೋಧಿಸಿ ವರದಿ ವಾಚನ ಮಾಡಿದರು.

ಡಿವೈಎಸ್ಪಿ ಬಿ.ಪರಶುರಾಮ್ ನಿರ್ಗಮನ ಪಥ ಸಂಚಲನದ ಮುಖ್ಯ ಕಮಾಂಡರ್ ಆಗಿದ್ದರು. 1ನೇ ತಂಡವನ್ನು ಡಿಎಆರ್ ಆರ್‌ಎಸ್‌ಐ ವಿನೋದ್‌ರಾಜ್, 2-ಆರ್‌ಎಸ್‌ಐ ಕೆ.ಆರ್.ಮಂಜುನಾಥ್, 3-ಆರ್‌ಎಸ್‌ಐ ಮಂಜುನಾಥ್ ಬಿದರಿಕೊಪ್ಪ, 4ನೇ ತಂಡ ಎಆರ್‌ಎಸ್‌ಐ ಕೆ.ಸುದರ್ಶನ್ ನೇತೃತ್ವದಲ್ಲಿ ನಿರ್ಗಮನ ಪಥ ಸಂಚನ ನಡೆಸಲಾಯಿತು. ಚಿತ್ರದುರ್ಗ ಡಿಎಆರ್ ಹಾಗೂ ಬೆಂಗಳೂರು ಸಿಎಆರ್ ಸೌತ್ ತಂಡದಿಂದ ವಾದ್ಯ ವೃಂದ ನಡೆಯಿತು.

ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಎಎಸ್‌ಪಿ ಕುಮಾರಸ್ವಾಮಿ, ಕಾರಾಗೃಹ ಅಧೀಕ್ಷಕ ಸಿದ್ದರಾಮ ಪಾಟೀಲ್, ಗೃಹರಕ್ಷಕ ದಳದ ಕಮಾಂಡೆಂಟ್ ಕೆ.ಸಂಧ್ಯಾ, ವೈದ್ಯ ಡಾ.ವಿಜಯ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net