

ತುಮಕೂರು: ಹೊಸ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣಕ್ಕೆ ಆಂತರಿಕ ಸಂಪನ್ಮೂಲ ಬಳಸಲು ವಿವಿ ಆಡಳಿತ ಮುಂದಾಗಿದ್ದು, ಶುಕ್ರವಾರ ನಡೆಯುವ ಸಿಂಡಿಕೇಟ್ ಸಭೆಯ ಅಜೆಂಡಾದಲ್ಲಿ ವಿಷಯವಿದೆ.
80 ಕೋಟಿ ರೂ. ವೆಚ್ಚದಲ್ಲಿ ಅಕಾಡೆಮಿಕ್ ಬ್ಲಾಕ್ 1 ನಿರ್ಮಿಸಲು ರೈಟ್ಸ್ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದ್ದು, ಸರ್ಕಾರ ಹಾಗೂ ವಿವಿ ತಲಾ ಶೇ.50 ಹಣ ನೀಡಬೇಕಿದೆ.
ವಿವಿ ವತಿಯಿಂದ 2020 ಜ.6ರಂದು 12ಕೋಟಿ ರೂ. ರೈಟ್ಸ್ ಸಂಸ್ಥೆಗೆ ನೀಡಲಾಗಿದ್ದರೂ ಸರ್ಕಾರದಿಂದ ನಯಾಪೈಸೆ ಅನುದಾನ ಬಂದಿಲ್ಲ. ಪ್ರಸ್ತುತ ಬಜೆಟ್‌ನಲ್ಲಿ ಘೋಷಿಸಿದಂತೆ ಸರ್ಕಾರ 5ಕೋಟಿ ರೂ. ಬಿಡುಗಡೆ ಮಾಡಿದೆ ಎನ್ನಲಾಗಿದ್ದು, ಇದರ ನೆಪದಲ್ಲಿ ಮತ್ತೆ ವಿವಿ ಆಂತರಿಕ ಸಂಪನ್ಮೂಲದಲ್ಲಿ 9 ಕೋಟಿ ರೂ. ಬಳಸಲು ಸಿಂಡಿಕೇಟ್ ಹುನ್ನಾರ ನಡೆಸಿದೆ ಎನ್ನಲಾಗಿದೆ.
ಆಂತರಿಕ ಸಂಪನ್ಮೂಲ ಬಳಕೆಗೆ ಅಧ್ಯಾಪಕರ ಸಂಘ ಆರಂಭದಿಂದಲೂ ವಿರೋಧಿಸುತ್ತಿದೆ. ಆದರೆ, ಕೆಲವು ಸಿಂಡಿಕೇಟ್ ಸದಸ್ಯರು ಸಂಪನ್ಮೂಲ ಬಳಕೆಗೆ ವಿಶೇಷ ಆಸಕ್ತಿ ತೋರಿರುವುದು ಅನುಮಾನಗಳಿಗೆ ಕಾರಣವಾಗಿದೆ. ‘ಆಂತರಿಕ ಸಂಪನ್ಮೂಲ ಬಳಕೆಗೆ ವಿರೋಧ’ ವ್ಯಕ್ತಪಡಿಸಿ ಕುಲಸಚಿವರಿಗೆ ವಿವಿ ಅಧ್ಯಾಪಕರ ಸಂಘ ಈ ಹಿಂದೆಯೇ ಪತ್ರ ಬರೆದು ನೂತನ ಕ್ಯಾಂಪಸ್‌ನಲ್ಲಿ ಕಟ್ಟಡ ನಿರ್ಮಾಣಕ್ಕೆ ಆಂತರಿಕ ಸಂಪನ್ಮೂಲ ಬಳಸುವ ವಿಷಯ ಸಿಂಡಿಕೇಟ್ ಸಭೆಯ ಮುಂದೆ ಪ್ರಸ್ತಾಪಕ್ಕೆ ತರದಂತೆ ಎಚ್ಚರಿಕೆ ಸಹ ನೀಡಿತ್ತು. ಹಾಗಾಗಿ, ಸಭೆಯ ಅಜೆಂಡಾದಿಂದಲೇ ಕೈಬಿಡಲಾಗಿತ್ತು.
ಬಿದರೆಕಟ್ಟೆ ಬಳಿಯ ನೂತನ ಕ್ಯಾಂಪಸ್‌ನಲ್ಲಿ ಅಂದಾಜು 80 ಕೋಟಿ ರೂ., ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಯೋಜನೆ ರೂಪಿಸಲಾಗಿದ್ದು, ಕೇಂದ್ರ ಸರ್ಕಾರಿ ಸ್ವಾಮ್ಯದ ರೈಟ್ಸ್ ಲಿಮಿಟೆಡ್‌ಗೆ ಗುತ್ತಿಗೆ ವಹಿಸಲಾಗಿದೆ. 4 ವರ್ಷಗಳಾದರೂ ಈವರೆಗೆ ಸರ್ಕಾರ ನಯಾಪೈಸೆ ಬಿಡುಗಡೆ ಮಾಡಿಲ್ಲ. ಈ ಹಿಂದೆ ಆರಂಭದಲ್ಲಿ ವಿವಿ ಆಂತರಿಕ ಸಂಪನ್ಮೂಲದಿಂದ 12 ಕೋಟಿ ರೂಪಾಯಿಯನ್ನು ರೈಟ್ಸ್ ಸಂಸ್ಥೆಗೆ ಬಿಡುಗಡೆ ಮಾಡಲಾಗಿದ್ದು, 4 ವರ್ಷಗಳಿಂದ ಕಾಮಗಾರಿ ಪ್ರಗತಿಯಲ್ಲಿದೆ, ಗುತ್ತಿಗೆದಾರರು 14 ಕೋಟಿ ರೂ. ಬಿಡುಗಡೆಗೆ ಕೋರಿದ್ದಾರೆ.
ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ?: ತುಮಕೂರು ವಿವಿ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳಕ್ಕೆ ವಿವಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಪ್ರಸ್ತುತ ಗರಿಷ್ಟ 27 ಸಾವಿರ ಮಾಸಿಕ ಗೌರವಧನ ನೀಡಲಾಗುತ್ತಿದ್ದು, ರಾಜ್ಯದ ಇತರ ವಿವಿಗಳಲ್ಲಿ ನೂತನ ರಾಷ್ಟ್ರೀಯ ನೀತಿಗೆ ಅನುಸಾರವಾಗಿ ಹೆಚ್ಚಿಸಿರುವಂತೆ ವೇತನ ಹೆಚ್ಚಳ ಮಾಡಲು ಸಿಂಡಿಕೇಟ್‌ನಲ್ಲಿ ಅಜೆಂಡಾ ಇಡಲಾಗಿದ್ದು ವೇತನ ಹೆಚ್ಚಳದ ಆಶಾಭಾವನೆ ಅತಿಥಿ ಉಪನ್ಯಾಸಕ ವಲಯದಲ್ಲಿದೆ.
ಸಭೆಯ ಪ್ರಮುಖ ಅಜೆಂಡಾ
ಆಂತರಿಕ ಸಂಪನ್ಮೂಲ ಬಳಕೆಗೇಕೆ ವಿಶೇಷ ಆಸಕ್ತಿ?: ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಬಳಸಬೇಕಾದ ಆಂತರಿಕ ಸಂಪನ್ಮೂಲ ನಿಧಿಯನ್ನು ಕಟ್ಟಡ ನಿರ್ಮಾಣ ಕಾಮಗಾರಿಗೆ ಬಳಸಲು ವಿವಿ ಆಡಳಿತ ಮಂಡಳಿ ಹಾಗೂ ಸಿಂಡಿಕೇಟ್ ಸದಸ್ಯರು ವಿಶೇಷ ಆಸಕ್ತಿ ತೋರಿಸುತ್ತಿರುವುದು ಅನುಮಾನ ಮೂಡಿಸಿದೆ. ಪ್ರೊ.ವೈ.ಎಸ್.ಸಿದ್ದೇಗೌಡ ಅವಧಿಯಲ್ಲಿ ನಿಧಿ ಬಳಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಸಿಂಡಿಕೇಟ್ ಸದಸ್ಯರೇ ಈಗ ನಿಧಿ ಬಳಸಲು ಅತೀ ಉತ್ಸಾಹ ತೋರಿಸುತ್ತಿರುವುದು ಆಶ್ಚರ್ಯ ಮೂಡಿಸಿದೆ. ವಿವಿ ಈಗಾಗಲೇ 12ಕೋಟಿ ರೂ. ನೀಡಿದ್ದು ಸರ್ಕಾರದಿಂದ 5ಕೋಟಿ ರೂ. ಬಂದಿದೆ. ಇನ್ನುಳಿದ 7ಕೋಟಿ ರೂ.ಗೆ ಸರ್ಕಾರದ ಮೇಲೆ ಒತ್ತಡ ಹೆೇರದೆ ಆಂತರಿಕ ನಿಧಿಯ ಮೇಲೆ ಕಣ್ಣಿಟ್ಟಿರುವ ಒಳಾರ್ಥದ ಬಗ್ಗೆ ತರಹೇವಾರಿ ಚರ್ಚೆ ವಿವಿ ಕ್ಯಾಂಪಸ್‌ನಲ್ಲಿ ಕೇಳಿಬಂದಿದೆ.
ಮೌಲ್ಯಮಾಪನಕ್ಕೂ ಕಾಸಿಲ್ಲದಂತಾಗಲಿದೆ: ತುಮಕೂರು ವಿವಿ ಆಂತರಿಕ ಸಂಪನ್ಮೂಲದಲ್ಲಿ 28 ಕೋಟಿ ರೂ. ಲಭ್ಯವಿದ್ದು ಬಹುತೇಕ ಹಣ ಅಧ್ಯಾಪಕರ ಪಿಂಚಣಿ ಮತ್ತಿತರ ಕಾರ್ಯಕ್ಕೆ ಬಳಸಬೇಕಿದೆ. ಉಳಿಯುವ 12 ರಿಂದ 15ಕೋಟಿ ರೂ. ಸಿವಿಲ್ ಕಾಮಗಾರಿಗೆ ಬಳಸಿದರೆ ವಿವಿಯಲ್ಲಿ ಇನ್ಯಾವುದೇ ಕಾರ್ಯಚಟುವಟಿಕೆ ನಡೆಸುವುದು ಕಷ್ಟವಾಗಲಿದೆ ಎಂಬ ಆತಂಕ ಎದುರಾಗಿದೆ.