

ಹುಬ್ಬಳ್ಳಿ: ಕೇಂದ್ರ ಸರ್ಕಾರದ ‘ಒಂದು ದೇಶ-ಒಂದು ಚುನಾವಣೆ’ ಚಿಂತನೆಯ ಹಿಂದೆ 2024ರ ಲೋಕಸಭೆ ಚುನಾವಣೆ ಮುಂದೂಡುವ ಹುನ್ನಾರವಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಟೀಕಿಸಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯ ಹಲವು ವರ್ಷಗಳಿಂದ ಚರ್ಚೆಯಲ್ಲಿ ಇತ್ತು. ಆದರೆ, ಕಳೆದ ನಾಲ್ಕು ವರ್ಷಗಳಿಂದ ಸುಮ್ಮನಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿರುವುದು ಶಂಕೆ, ಅನುಮಾನ ಮೂಡಿಸುತ್ತಿದೆ ಎಂದರು.
‘ಒಂದು ದೇಶ-ಒಂದು ಚುನಾವಣೆ’ ಸಾಧ್ಯತೆಗಳ ಬಗ್ಗೆ ಸಮಿತಿ ರಚನೆಯನ್ನು 3-4 ವರ್ಷಗಳ ಹಿಂದೆಯೇ ಮಾಡಬೇಕಿತ್ತು. ರಾಮನಾಥ್ ಕೋವಿಂದ ಅವರ ಪೂರ್ವಾಶ್ರಮ ಎಲ್ಲರಿಗೂ ಗೊತ್ತಿದೆ. ರಾಜಕೀಯ ವಾಸನೆ ಇದ್ದವರನ್ನು ನೇಮಕ ಮಾಡಬಾರದು ಎಂಬ ಪ್ರಬುದ್ಧತೆ ಬೇಡವೇ? ಪಕ್ಷಾತೀತವಾದ ಬಹಳಷ್ಟು ವ್ಯಕ್ತಿಗಳು ಇದ್ದರು. ಕೇಂದ್ರ ಸರ್ಕಾರದ ಹೆಜ್ಜೆಯಲ್ಲಿ ಸಾಕಷ್ಟು ಅನುಮಾನಗಳಿವೆ. ಲೋಕಸಭೆ ಚುನಾವಣೆ ಮುಂದೂಡುವ ಪ್ರಯತ್ನ ಮಾಡಿದರೆ ಜನರು ಸಹಿಸುವುದಿಲ್ಲ ಎಂದು ಹೇಳಿದರು.
ಮಹದಾಯಿ, ಕಳಸಾ ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಕೊಡಿಸಲಿ. ಇದೇ ನೆಹರು ಮೈದಾನದಲ್ಲಿ ಕಾಗದ ತೋರಿಸಿದ್ದರು. ದೆಹಲಿಗೆ ಹೋದ ಕೂಡಲೇ ಅದನ್ನೇ ಮಾಡುತ್ತೇನೆ ಎಂದಿದ್ದರು. ಬಿಜೆಪಿ ಸಂಸದರು, ನಾಯಕರು ಕರ್ನಾಟಕದ ಹಿತದೃಷ್ಟಿಯಿಂದ ಜನರಿಗೆ ಏನು ಮಾತು ಕೊಟ್ಟಿದ್ದರೋ ಅದನ್ನು ಮೊದಲು ಮಾಡಲಿ ಎಂದರು.