

ಮೈಸೂರು: ಎಡ, ಬಲ ಸಮುದಾಯಗಳನ್ನು ಬೇರ್ಪಡಿಸಿ ಶಾಶ್ವತ ಶತ್ರುಗಳನ್ನಾಗಿ ಮಾಡಲು ಷಡ್ಯಂತ್ರ ನಡೆಯುತ್ತಿದೆ ಎಂದು ಗಾಂಧಿನಗರದ ಉರಿಲಿಂಗಿ ಪೆದ್ದಿ ಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘ, ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ನಾಗ, ಮಹಾರ್, ಹೊಲೆಯ, ಛಲವಾದಿ ಸಮುದಾಯದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆ ಕುರಿತ ಒಂದು ದಿನದ ವಿಚಾರಸಂಕಿರಣದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕೇಂದ್ರದಿಂದ ಎಡ-ಬಲಗಳನ್ನು ಬೇರ್ಪಡಿಸಿ ಶಾಶ್ವತವಾಗಿ ಶತ್ರುಗಳನ್ನಾಗಿ ಮಾಡಲು ನೂರಾರು ಕೋಟಿ ರೂ. ಖರ್ಚು ಮಾಡಿ ಷಡ್ಯಂತ್ರ ಮಾಡಲಾಗುತ್ತಿದೆ. ಇದು ಭಾರತದ ವಿಶ್ವವಿದ್ಯಾನಿಲಯಗಳಲ್ಲೇ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.
ಅದಕ್ಕಾಗಿಯೇ ಮೈಸೂರು ವಿ.ವಿ. ಪ್ರೊಫೆಸರ್ ಒಬ್ಬ ಅಂಬೇಡ್ಕರ್ ಬಗ್ಗೆ ಮಾತನಾಡಿದ್ದಾನೆ. ಇದನ್ನು ನಾವು ಸಾಮಾನ್ಯ ಎಂದು ತಿಳಿದುಕೊಳ್ಳಬಾರದು. ಇದು ಮನುವಾದಿಗಳ ಷಡ್ಯಂತ್ರ ಎಂದು ಟೀಕಿಸಿದರು.
ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದ್ದು, ಯಾರೂ ಜಾತಿಯಿಂದ ಮುಕ್ತರಾಗಿಲ್ಲ. ನನ್ನನ್ನು ಜಾತಿ ಸ್ವಾಮೀಜಿ ಮಾಡಿದ್ದರೆ, ಅದಕ್ಕೆ ಯಾವುದೇ ಬೇಸರವಿಲ್ಲದೇ ಧ್ವನಿಯಿಲ್ಲದ ಜಾತಿಗೆ ಧ್ವನಿಯಾಗಿದ್ದೇನೆ ಎಂದು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದರು.
ಒಳ ಮೀಸಲಾತಿ ವರದಿಯನ್ನು ಹಳೆಯ ರೋಸ್ಟರ್‌ಗಳಂತೆ ಕ್ಯಾಬಿನೆಟ್ನಲ್ಲಿ ಬಿಡುಗಡೆ ಮಾಡಿಲ್ಲ. ಪ್ರವರ್ಗ ‘ಎ’ ನಲ್ಲಿ ಇರಬೇಕಾದ ನಾವು ‘ಬಿ’ ಗೆ ಬಂದಿದ್ದೇವೆ. ಇದು ಅತ್ಯಂತ ಅಪಾಯ. ಸೆಪ್ಟೆಂಬರ್‌ನಲ್ಲಿ ಪುನಃ ಸೆನ್ಸಸ್ ಬರುತ್ತಿದೆ ಅದರಲ್ಲಿ ಏನು ಬರೆಸಬೇಕು ಎಂಬುದರ ಬಗ್ಗೆ ಚಿಂತನೆ ಮಾಡಬೇಕು. ನಿಮ್ಮ ಮೂಲ ಜಾತಿಯನ್ನು ಹೇಳಿಕೊಳ್ಳದಿದ್ದರೆ ನಿಮ್ಮ ಅಸ್ವಿತ್ವ ಸತ್ತಂತೆ ಎಂದು ಹೇಳಿದರು.
ನೆನಪುಗಳು ಇಲ್ಲದ ಸಮಾಜ ಕನಸುಗಳನ್ನು ಕಟ್ಟಲು ಸಾಧ್ಯವಿಲ್ಲ. ಅಂಬೇಡ್ಕರ್ ಹೇಳಿದಂತೆ ಜಾಗೃತ ಸಮುದಾಯ ಜೀವಂತವಾಗಿರುತ್ತದೆ. ಬಾಬಾ ಸಾಹೇಬ್ ಅವರನ್ನು ಮರೆತು ಮಾತನಾಡುವನು ಮನುಷ್ಯನಾಗಲು ಸಾಧ್ಯವಿಲ್ಲ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ನಮ್ಮ ಒಗ್ಗೂಡುವಿಕೆ ತಡವಾಗಿಯಾದರೂ ಜ್ಞಾನೋದಯವಾಗಿದೆ. ಆದರೆ ಮಾದಿಗರನ್ನು ನಮ್ಮ ಮೇಲೆ ಎತ್ತಿಕೊಟ್ಟುವ ಕೆಲಸ ಆಗುತ್ತಿರುವುದರಿಂದ ಎಲ್ಲೋ ಒಂದು ಕಡೆ ಮತ್ತೆ ದೇಶ ಮನುವಾದದ ಕಡೆಗೆ ಹೋಗುತ್ತಾ ಇದೆ ಅನಿಸುತ್ತಿದೆ ಎಂದು ಹೇಳಿದರು.
ಅಸ್ಪಶ್ಯ ಸಮಾಜಗಳು ಒಂದಾಗುವ ಸಮಯದಲ್ಲಿ ಮನುವಾದ ಮುಂದೆ ಬಂದಿದೆ. ನಾವೆಲ್ಲಾ ಜಾಗೃತರಾಗಿ ಮನುವಾದನ್ನು ನಾಶ ಮಾಡಬೇಕು. ಸಂವಿಧಾನ ಉಳಿಯ ಬೇಕಾದರೆ ಸಂವಿಧಾನದ ಮೂಲಕ ಅನುಕೂಲ ಪಡೆಯುವ ನಾವುಗಳೆಲ್ಲರೂ ಒಂದಾಗಬೇಕು ಎಂದು ಮನವಿ ಮಾಡಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಮೀಸಲಾತಿ ಪಟ್ಟಿಯಲ್ಲಿ ಹೊಲೆಯ ಜಾತಿ ಎಂದು ನಮೂದಿಸಲು ನಗರ ಪ್ರದೇಶದ ಬಹಳಷ್ಟು ಜನರು ಹಿಂಜರಿದ್ದರಿಂದ ಒಳ ಮೀಸಲಾತಿ ವರದಿಯಲ್ಲಿ ಹಿನ್ನಡೆಯಾಯಿತು ಎಂದು ಹೇಳಿದರು.
ಒಳಮೀಸಲಾತಿ ಅಂಕಿ-ಅಂಶಗಳ ಪ್ರಕಾರ ನಮಗೆ ಸಮಾಧಾನ ಆಗಿಲ್ಲ. ನಮ್ಮ ಮೂಲ ಜಾತಿಯನ್ನು ಸ್ವಾಭಿಮಾನದಿಂದ ಹೇಳಿಕೊಳ್ಳದಿದ್ದರೆ ನಾವು ಇದ್ದರೂ ಏನು ಪ್ರಯೋಜನ. ಇದರಿಂದ ಮುಂದಿನ ಪೀಳಿಗೆಗೆ ಬಹಳಷ್ಟು ಅನನೂಕೂಲ ಆಗಲಿದೆ ಎಂದು ಎಚ್ಚರಿಸಿದರು.
ನಿವೃತ್ತ ಇಂಜಿನಿಯರ್ ಟಿ.ಆರ್.ಶಿವರಾಮು, ಮಾಜಿ ಮೇಯರ್ ಪುರುಷೋತ್ತಮ್, ಡಿ.ಚಂದ್ರಶೇಖರ್, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎನ್.ಭಾಸ್ಕರ್ ಇತರರು ಇದ್ದರು.
ವಿಚಾರಸಂಕಿರಣದಲ್ಲಿ ಚಿಂತಕ ವಿಠಲ್ ವಗ್ಗನ್, ಸಾಹಿತಿ ರಘೋತ್ತಮ ಹೂಬ, ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್, ಚಿಂತಕರಾದ ಡಾ.ಎನ್.ಚಿನ್ನಸ್ವಾಮಿ ಸೋಸಲೆ ವಿಷಯ ಮಂಡನೆ ಮಾಡಿದರು. ಡಾ.ಕೃಷ್ಣಮೂರ್ತಿ ಚಮರಂ, ಹಾರೋಹಳ್ಳಿ ರವೀಂದ್ರ, ಬಿ.ಎಂ.ಲಿಂಗರಾಜು ಪ್ರತಿಕ್ರಿಯೆ ನೀಡಿದರು. ಮಹೇಶ್ ಇರಸವಾಡಿ, ರಾಘವೇಂದ್ರ ಅಪುರ ಗೋಷ್ಠಿಗಳ ನಿರ್ವಹಣೆ ಮಾಡಿದರು.