ವಿರೋಧಿಗಳಿಂದ ಹತ್ಯೆಗೆ ಸಂಚು

11 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಮ್ಮ ಸಮಾಜದ ಅಪ್ರಾಪ್ತ ಯುವಕರಿಂದ ನನ್ನ ಹತ್ಯೆಗೆ ವಿರೋಧಿಗಳು ಸಂಚು ರೂಪಿಸಿದ್ದಾರೆ ಎಂದು ಅಂಜುಮನ್​ ಇಸ್ಲಾಂ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್​ ತಮಟಗಾರ ಆರೋಪಿಸಿದರು.
ಧಾರವಾಡದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ರಾತ್ರಿ ಕೆಲ ಯುವಕರು ರಸೂಲಪುರದಲ್ಲಿ ಗಲಾಟೆ ನಡೆಸಿದ್ದಲ್ಲದೆ, ನನ್ನ ಹತ್ಯೆ ಕುರಿತು ಮಾತನಾಡಿದ್ದಾರೆ. ಮತ್ತೊಬ್ಬರ ಕುಮ್ಮಕ್ಕಿನಿಂದ ಯುವಕರು ಇಂತಹ ಕೃತ್ಯ ಮಾಡುತ್ತಿದ್ದಾರೆ. ಇವರ ಹಿಂದೆ ಯಾರಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕಿದೆ ಎಂದರು.
ಪೊಲೀಸ್​ ಆಯಕ್ತರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಈ ವಿಷಯದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲಿ. ಇದರ ಹಿಂದೆ ಯಾರಿದ್ದಾರೆ ಎಂಬ ಮಾಹಿತಿ ನನಗೂ ಇದೆ. ಪೊಲೀಸರು ನಿಷ್ಪಕ್ಷ ತನಿಖೆ ನಡೆಸದಿದ್ದರೆ ಎಲ್ಲ ಮಾಹಿತಿ ಬಹಿರಂಗ ಪಡಿಸುವುದಾಗಿ ಹೇಳಿದರು.
ನನಗೆ ಜೀವ ಭಯ ಇದೆ. ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಸೇರಿ ಎಲ್ಲ ಪಕ್ಷದಲ್ಲೂ ವಿರೋಧಿಗಳಿದ್ದಾರೆ. ಇದರಲ್ಲಿ ರಾಜಕೀಯ ಅಡಗಿದೆ. ಪೊಲೀಸರಿಗೆ ಈ ಕುರಿತು ಎಲ್ಲ ಮಾಹಿತಿ ನೀಡಿದ್ದೇವೆ. ಅಪ್ರಾಪ್ತ ಯುವಕರ ಗುಂಪು ನಶೆಯಲ್ಲಿ ಕೊಲ್ಲುವ ಮಾತು ಆಡಿದ್ದಾರೆ. ಅವರು ನನಗೆ ಪರಿಚಯ ಇಲ್ಲ. ಈ ಹಿಂದೆಯೂ ಹತ್ಯೆಗೆ ಯತ್ನಿಸಿದ್ದರು. ಇದೀಗ ಮುಸ್ಲಿಂ ಹುಡುಗರಿಗೆ ಸುಪಾರಿ ನೀಡಲಾಗಿದೆ ಎಂದು ದೂರಿದರು.
ಒಂದು ವರ್ಷದ ಹಿಂದೆ ನನ್ನ ಮುಗಿಸಲು ಸಂಚು ನಡೆದಿದೆ. ಈ ವಿಷಯವಾಗಿ ಸಾಕಷ್ಟು ಯುವಕರು ನನಗೆ ಹೇಳಿದ್ದಾರೆ. ಹೀಗಾಗಿ ನನಗೆ ಏನಾದರೂ ಆದಲ್ಲಿ ಇಂತಹವರೇ ಕಾರಣ ಎಂದು ಮನೆಯಲ್ಲಿ ಹೇಳಿದ್ದೇನೆ. ನಾನು ಸಂಶಯ ಪಟ್ಟವರ ಬಗ್ಗೆ ಪೊಲೀಸ್​ ಆಯುಕ್ತರಿಗೆ ಮಾಹಿತಿ ಕೊಟ್ಟಿದ್ದೇನೆ. ನನಗೆ ಪೊಲೀಸರು ರಕ್ಷಣೆ ನೀಡಬೇಕು ಎಂದರು.
ನಾಲ್ವರು ವಶಕ್ಕೆ: ಶನಿವಾರ ರಾತ್ರಿ ರಸೂಲಪುರ ಓಣಿಯಲ್ಲಿ ಯುವಕರ ಗುಂಪು ಗಲಾಟೆ ನಡೆಸಿ ತಮಟಗಾರ ಕುಟುಂಬಸ್ಥರ ಹೆಸರಿನಲ್ಲಿ ಕೂಗಾಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಸಹ ಮಾಡಿದ್ದಾರೆ ಎಂದು ಜಮಾಲ್​ ತಮಟಗಾರ ದೂರು ಸಲ್ಲಿಸಿದ್ದಾರೆ. ದೂರಿನ ಅನ್ವಯ ತನಿಖೆ ನಡೆಸಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್​ ಆಯುಕ್ತ ಎನ್​. ಶಶಿಕುಮಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net