ಶಾಸಕ ವಿನಯ ಅವರಿಂದ ಅಧಿಕಾರ ಮೊಟಕು ಷಡ್ಯಂತ್ರ: ಅಂಚಟಗೇರಿ

WhatsApp Image 2025-06-03 at 10.29.40 AM
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶಾಸಕ ವಿನಯ ಕುಲಕರ್ಣಿ ಅವರು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯನ್ನು ವಿಂಗಡಿಸಿ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತು ಚುನಾಯಿತ ಪ್ರತಿನಿಧಿಗಳ ಅಧಿಕಾರ ಮೊಟಕುಗೊಳಿಸುವ ಷಡ್ಯಂತ್ರ ಮಾಡಿದ್ದಾರೆ ಎಂದು ಮಾಜಿ ಮೇಯರ್ ಈರೇಶ ಅಂಚಟಗೇರಿ ಗಂಭೀರ ಆರೋಪ ಮಾಡಿದ್ದಾರೆ.

ಪ್ರಕಟಣೆ ನೀಡಿರುವ ಅವರು, ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕವಾಗಿ ರಚಿಸಲು ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಚುನಾಯಿತರ ಅಧಿಕಾರ ಇನ್ನೂ 2 ವರ್ಷ ಇರುವಾಗ ಸೂಪರಸೀಡ್ ಮಾಡಿ ಅವರ ಅಽಕಾರವನ್ನು ಮೊಟಕುಗೊಳಿಸುವ ದುರುದ್ದೇಶವಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲದ ಕಾರಣ ರಾಜ್ಯಪಾಲರು ತಡೆಹಿಡಿದಿದ್ದಾರೆ. ಧಾರವಾಡದ ವಿವಿಧ ಸಂಘಟನೆಗಳು, ಇಂಜಿನೀಯರ್ ಅಸೋಸಿಯೇಷನ್, ಸರ್ಕಾರಿ ನೌಕರರ ಸಂಘಗಳು ವಿರೋಧ ವ್ಯಕ್ತಪಡಿಸಿವೆ. ತಮ್ಮ ದುರುದ್ದೇಶ ಈಡರದಿರುವುದರಿಂದ ಶಾಸಕರು ಬಿಜೆಪಿ ಮುಖಂಡರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರು ಹುನ್ನಾರ ಕೈಬಿಟ್ಟು ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸಬೇಕು ಎಂದು ಅಂಚಟಗೇರಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net