

ಹುಬ್ಬಳ್ಳಿ : ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಮುಗಿಸಿದರೆ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟ ಅಂತ್ಯವಾಗಲಿದೆಯೆಂದು ಕಾಂಗ್ರೆಸ್ ಸರ್ಕಾರ ಭಾವಿಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆರೋಪಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿ ವಿಷಪೂರಿತ ಆಹಾರ ಸೇವನೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆಹಾರದಲ್ಲಿ ವಿಷ ಬೆರೆಸಿ, ಹತ್ಯೆಗೆಯ್ಯುವ ಸಂಚು ನಡೆದಿದೆ. ತಾವು ಸೇವಿಸಿರುವ ಆಹಾರದಲ್ಲಿ ವಿಷ ಬೆರೆಸಿರುವ ಬಗ್ಗೆ ಸ್ವತಃ ಸ್ವಾಮೀಜಿ ಅವರೇ ಶಂಕೆ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿ ಅವರನ್ನು ಕೊಲೆಗೈಯುವ ಬಹುದೊಡ್ಡ ದುಷ್ಟ ಯತ್ನ ಇದಾಗಿದೆ. ಈ ಕುತಂತ್ರದ ಹಿಂದೆ ಇರುವವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಕೆಲ ದಿನಗಳ ಹಿಂದಷ್ಟೆ ಶ್ರೀಮಠಕ್ಕೆ ಬೀಗ ಜಡಿಯಲಾಗಿತ್ತು. ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಮರಳಿ ಬಾಗಿಲು ತೆರೆಯಲಾಯಿತು. ಆಗಷ್ಟೆ ಶ್ರೀಗಳು ಮಠಕ್ಕೆ ಪ್ರವೇಶ ಮಾಡಿದ್ದರು. ಮಠದಲ್ಲಿ ಆಗುವ ಬೆಳವಣಿಗೆ ಗಮನಿಸಲು ಇಬ್ಬರು ಮುಸ್ಲಿಮ್ ಯುವಕರನ್ನು ನೇಮಿಸಲಾಗಿದೆ. ಅವರು ಒಂದು ದಿನ ಅಡುಗೆ ಮನೆಗೆ ಹೋಗಿದ್ದರು. ಅದೇ ದಿನ ಸ್ವಾಮೀಜಿ ಸೇವಿಸಿದ ಆಹಾರದಿಂದ ಅವರ ಆರೋಗ್ಯ ಹದಗೆಟ್ಟಿದೆ ಎಂದರು.
ಪಂಚಮಸಾಲಿ ಸಮಾಜ ಈ ಎಲ್ಲ ಘಟನೆಯನ್ನು ಗಮನಿಸುತ್ತಿದೆ. ಸಮಾಜಕ್ಕೆ 2ಎ ಮೀಸಲಾತಿ ಕೊಡಿಸಲು ಸ್ವಾಮೀಜಿ ಹೋರಾಟ ನಡೆಸಿದ್ದರು. ಅವರಿಗೆ ತೊಂದರೆ ನೀಡಿ, ಹೋರಾಟಕ್ಕೆ ವಿದಾಯ ಹೇಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ನ ಕುತಂತ್ರಕ್ಕೆ ಸಕಾಲದಲ್ಲಿ ಉತ್ತರ ನೀಡಲಾಗುವುದು ಎಂದು ಹೇಳಿದರು.
ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೇವಲ ಮಠಕ್ಕೆ ಸೀಮಿತವಾಗಿಲ್ಲ. ಸಮಾಜದ ಜನರಿಗೆ ಸರ್ಕಾರದ ಸೌಲಭ್ಯ ಕೊಡಿಸಲು ಹಗಲಿರುಳು ಪ್ರಯತ್ನಿಸುತ್ತಿದ್ದಾರೆ. ಅವರು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ಸ್ವಾಮೀಜಿ ಅವರಿಗೆ ಯಾವುದೇ ರಾಜಕೀಯ ವ್ಯಕ್ತಿ ಅಥವಾ ಪಕ್ಷದ ಅವಶ್ಯಕತೆ ಇಲ್ಲ. ಅವರು ಸಮಾಜದ ಪರ ಕೆಲಸ ಮಾಡುತ್ತಿದ್ದಾರೆ ಎಂದರು.
ಪ್ರತ್ಯೇಕ ಪೀಠ ಸ್ಥಾಪನೆಗೆ ಸ್ವಾಮೀಜಿ ಅವರಿಗೆ ಸಲಹೆ ನೀಡಿದ್ದೇವೆ. ಆದರೆ, ತಮಗೆ ಯಾವುದೇ ಪೀಠ ಬೇಡ. ಹೋರಾಟ ರೂಪಿಸುವುದಾಗಿ ಅವರು ಹೇಳಿದ್ದಾರೆ ಎಂದರು.