ಖಾಸಗಿಗೆ ಕಾವಲ್ ಭೂಮಿ ಹಂಚಲು ಸಂಚು

PHOTO-1-02
Published on

ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ರಾಮಗಿರಿ ಹೋಬಳಿಯ ಅಂದಾಜು 3040 ಎಕರೆ ಅಮೃತ ಮಹಲ್ ಕಾವಲ್ ಗೋಮಾಳ ಜಮೀನನ್ನು ಖಾಸಗಿಯವರಿಗೆ ಹಂಚಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್‌ಬಾಬು ಆರೋಪಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯ ಗೋ ತಳಿಗಳ ಸಂರಕ್ಷಣೆ ಹಾಗೂ ಜಾನುವಾರು ಮೇವಿಗಾಗಿ ನೂರಾರು ವರ್ಷಗಳ ಹಿಂದೆ ಈ ಭೂಮಿಯನ್ನು ಕಾಯ್ದಿರಿಸಲಾಗಿದೆ. ಇದನ್ನು ಬೇರೆ ಉಪಯೋಗಕ್ಕೆ ನೀಡುವಂತಿಲ್ಲ ಎಂದರು.

ಆದರೆ, ಕರ್ನಾಟಕ ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಬಂಡವಾಳಶಾಹಿಗಳು ಜಮೀನು ದೋಚಲು ಸರ್ಕಾರ ದಾರಿ ಮಾಡಿಕೊಟ್ಟಿದೆ. ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಜನವಿರೋಧಿ ಪ್ರಸ್ತಾವನೆ ಮೂಲಕ ಕಂದಾಯ ಸಚಿವ ಆರ್.ಅಶೋಕ್, ಈ ಜಮೀನನ್ನು ಡಿ ನೋಟಿಫೈ ಮಾಡಿ ಖಾಸಗಿಯವರಿಗೆ ಹಂಚಲು ಸಿದ್ಧತೆ ನಡೆಸಿದ್ದಾರೆ ಎಂದು ದೂರಿದರು.

ಸದ್ಯ ಇದರ ಕಡತ ಸಿಎಂ ಕಚೇರಿಯಲ್ಲಿದೆ. ನೂರಾರು ಕೋಟಿ ರೂ. ಅಕ್ರಮಕ್ಕೆ ವ್ಯವಸ್ಥಿತ ಸಂಚು ನಡೆದಿದ್ದು, ಲೋಕಾಯುಕ್ತರು ಮಧ್ಯ ಪ್ರವೇಶಿಸಿ ಕಾವಲ್ ಜಮೀನು ರಕ್ಷಿಸಬೇಕೆಂದು ಆಗ್ರಹಿಸಿದರು.

ಇದರಲ್ಲಿ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸುವುದಕ್ಕೆ ಆಕ್ಷೇಪವಿಲ್ಲ. ಕಾಂಗ್ರೆಸ್ ಸಾಗುವಳಿದಾರರ ಪರವಾಗಿದೆ. ಆದರೆ, ಇಷ್ಟೊಂದು ಪ್ರಮಾಣದಲ್ಲಿ ಕಾವಲ್‌ಭೂಮಿ ಸಾಗುವಳಿ ಆಗಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಕಾನೂನು ಘಟಕದ ಉಪಾಧ್ಯಕ್ಷ ಎನ್.ದಿವಾಕರ್, ಜಿಲ್ಲಾಧ್ಯಕ್ಷ ಡಿ.ಎಸ್.ಸುದರ್ಶ ನ್, ವಕೀಲ ಬಿಸ್ನಳ್ಳಿ ಜಯಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net