

ಶಿವಮೊಗ್ಗ: ಅಡಕೆ ಬೆಳೆಗಾರರ ಮನಸ್ಸು ಕದಡುವ ಪಿತೂರಿ ನಡೆಯುತ್ತಿದೆ. ಇಲ್ಲಿ ರಾಜಕೀಯ ಹುನ್ನಾರವಿದೆ. ಹೀಗಾಗಿ ಭೂತಾನ್ ಆಮದು ಅಡಕೆ ವಿಷಯದಲ್ಲಿ ಪ್ರತಿಪಕ್ಷಗಳು ಜನರಿಗೆ ತಪ್ಪು ಮಾಹಿತಿ ನೀಡುತ್ತಿವೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕಿಡಿಕಾರಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಅಡಕೆಗೆ ಉತ್ತಮ ಧಾರಣೆಯಿದೆ. ಮಾರುಕಟ್ಟೆಯೂ ಸ್ಥಿರವಾಗಿದೆ. ಈ ಸಂದರ್ಭದಲ್ಲಿ ಭೂತಾನ್ ಅಡಕೆ ವಿಷಯದಲ್ಲಿ ಆತಂಕ ಸೃಷ್ಟಿಸಿ ಮಾರುಕಟ್ಟೆಯನ್ನು ಅಸ್ಥಿರಗೊಳಿಸುವುದು ಮಾತ್ರವಲ್ಲದೇ ರಾಜಕೀಯ ಲಾಭ ಪಡೆಯುವ ಹುನ್ನಾರ ಕೆಲವರದ್ದಾಗಿ. ಈ ಬಗ್ಗೆ ನಾವು ಜನರಲ್ಲಿ ಜಾಗೃತಿ ಮೂಡಿಸಲಿದ್ದೇವೆ ಎಂದರು.
ಹಿಂದೆ ಯುಪಿಎ ಸರ್ಕಾರ ಆಮದು ಅಡಕೆ ಕೆಜಿಗೆ 150 ರೂ. ನಿಗದಿ ಮಾಡಿತ್ತು. ಬಳಿಕ ಎನ್‌ಡಿಎ ಸರ್ಕಾರ 250 ರೂ.ಗೆ ಏರಿಕೆ ಮಾಡಿತ್ತು. ನಂತರ ನಾವೆಲ್ಲ ಒತ್ತಡ ಹೇರಿದ ಪರಿಣಾಮ ಅದನ್ನು 350 ರೂ.ಗೆ ಹೆಚ್ಚಿಸಲಾಯಿತು. ಭೂತಾನ್‌ನಿಂದ ಆಮದಾಗಲಿರುವ 17 ಸಾವಿರ ಟನ್ ಹಸಿ ಅಡಕೆ ನಮ್ಮ ದೇಶದಲ್ಲಿನ ಅಡಕೆ ಉತ್ಪಾದನೆಯ ಶೇ.2ರಷ್ಟಕ್ಕೆ ಸಮ. ಹೀಗಾಗಿ ಅಡಕೆ ಬೆಳೆಗಾರರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಪೇಪರ್ ಟೈಗರ್‌ಗಳಿಂದ ಅಪಪ್ರಚಾರ: ನಮ್ಮಲ್ಲಿ ಕೆಲವು ಪೇಪರ್ ಟೈಗರ್‌ಗಳಿದ್ದಾರೆ. ಅವರಿಗೆ ಅಡಕೆ ಬಗ್ಗೆ ಅಪಪ್ರಚಾರ ಮಾಡುವುದು, ಕೇಂದ್ರ ಸರ್ಕಾರವನ್ನು ಟೀಕಿಸುವುದೇ ಕೆಲಸ. ಅಡಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂದು ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ನೀಡಿದ್ದು ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗಲೇ ಎಂಬುದನ್ನು ಕೆಲವರು ಮರೆತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಮುಖಂಡರ ವಿರುದ್ಧ ಶಾಸಕ ಆರಗ ಜ್ಞಾನೇಂದ್ರ ಹರಿಹಾಯ್ದರು.
ಅಡಕೆಗೆ ಗುಣಮಟ್ಟ ನಿರ್ಧಾರವಾಗಿದೆ. ಬಂದರುಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ. ಬಿಲ್ ರಹಿತ ಸಾಗಣೆಗೆ ಅವಕಾಶ ಇಲ್ಲದಂತಾಗಿದೆ. ಭೂತಾನ್‌ನಿಂದ ಸಮುದ್ರಮಾರ್ಗವಾಗಿ ಬರುವ ಅಡಕೆ ಇಲ್ಲಿಗೆ ಬರುವಾಗ ನಿಷ್ಪ್ರಯೋಜಕವಾಗುತ್ತದೆ. ಹೀಗಾಗಿ ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ ಎಂದರು.