

ಹಿರಿಯೂರು: ದಲಿತ ಸಮುದಾಯ ಸ್ನೇಹಿ ಡಿ.ಸುಧಾಕರ್ ಮೇಲಿನ ಜಾತಿ ನಿಂದನೆ ಪ್ರಕರಣವನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು. ಈ ಮೂಲಕ ಸಚಿವರ ತೇಜೋವಧೆ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕೆಪಿಸಿಸಿ ಸದಸ್ಯ ಡಾ.ಬಿ.ತಿಪ್ಪೇಸ್ವಾಮಿ ಜೆಜೆ ಹಟ್ಟಿ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಭಾಂಗಣದಲ್ಲಿ ಮಾದಿಗ ಮಹಾಸಭಾದಿಂದ ಗುರುವಾರ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಹಿರಿಯೂರು, ಚಳ್ಳಕೆರೆ ಕ್ಷೇತ್ರದಲ್ಲಿ 40 ವಷರ್ಗಳಿಂದಲೂ ಮಾದಿಗ ಸಮಾಜದ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದು, ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇಂತಹ ನಾಯಕನ ರಾಜಕೀಯ ಪ್ರಗತಿ ಸಹಿಸದ ವಿರೋಧಿಗಳು ಷಡ್ಯಂತ್ರ ನಡೆಸಿದ್ದಾರೆ ಎಂದು ದೂರಿದರು.
ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಸದಾಶಿವ ಆಯೋಗ ರಚನೆ ಸಂದರ್ಭದಲ್ಲಿ 50 ಕೋಟಿ ರೂ. ಅನುದಾನ ನೀಡಿದ್ದ ಸುಧಾಕರ್, ನಮ್ಮ ಸಮುದಾಯದ ಕಾಳಜಿಗೆ ಸಾಕ್ಷಿಯಾಗಿದ್ದಾರೆ. ಹೀಗಾಗಿ ಸರ್ಕಾರ ಪ್ರಕರಣ ಹಿಂಪಡೆಯಬೇಕು. ಇಲ್ಲದಿದ್ದರೆ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಮಹಾಲಿಂಗಪ್ಪ, ದಲಿತ ಮುಖಂಡರಾದ ಭರಂಪುರ ಮಲ್ಲಪ್ಪ, ಮೀಸೆ ಶ್ರೀನಿವಾಸ್, ಬೆಳ್ಳಿಯಪ್ಪ, ಓಬಳೇಶ್, ಹನುಮಂತರಾಯ, ರಂಗನಾಥ್, ಮಂಜುನಾಥ್, ಕರುಣ್ ಕುಮಾರ್, ಸುರೇಶ್ ಗಾಂಧಿನಗರ, ಕರಿಸ್ವಾಮಿ, ಅಡವೆಪ್ಪ, ಮಹೇಶ್, ಎಸ್.ಮಹಾಂತೇಶ್ ಇತರರಿದ್ದರು.