ಬಿಎಸ್‌ವೈ ವಿರುದ್ಧ ಷಡ್ಯಂತ್ರ: ಬಿವೈಆರ್

b y raghavendra
ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ
Published on

ಶಿವಮೊಗ್ಗ: ಎರಡು ತಿಂಗಳಿನಿಂದ ಏನೂ ಬೆಳವಣಿಗೆ ಕಾಣದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣ ಏಕಾಏಕಿ ವೇಗ ಪಡೆದಿರುವುದರ ಹಿಂದೆ ಯಾವುದೋ ದುರುದ್ದೇಶವಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅನುಮಾನ ವ್ಯಕ್ತಪಡಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೋಕ್ಸೊ ಪ್ರಕರಣದ ಕುರಿತು ಸಿಐಡಿ ತನಿಖೆ ನಡೆಯುತ್ತಿದೆ. ಆಕೆ ಯಡಿಯೂರಪ್ಪ ಮಾತ್ರವಲ್ಲ ಅನೇಕರ ವಿರುದ್ಧ ಇದೇ ರೀತಿ ದೂರು ನೀಡಿದ್ದಾರೆ. ದೂರುದಾರರು ಮಾನಸಿಕ ಅಸ್ವಸ್ಥೆ ಎಂಬ ಮಾತುಗಳನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಆ ಸಂದರ್ಭದಲ್ಲಿ ಹೇಳಿದ್ದರು. ಈಗ ನಡೆದಿರುವ ಬೆಳವಣಿಗೆ ಆಶ್ಚರ್ಯ ಮೂಡಿಸಿದೆ ಎಂದರು.
ಬಿ ರಿಪೋರ್ಟ್ ಹಾಕುವಂತಹ ಪ್ರಕರಣ ಏಕಾಏಕಿ ಎರಡ್ಮೂರು ದಿನದಲ್ಲಿ ಅನಿರೀಕ್ಷಿತ ತಿರುವು ಪಡೆದಿರುವುದು ವಿಪರ್ಯಾಸ. ರಾಹುಲ್ ಗಾಂಧಿ ರಾಜ್ಯದ ನ್ಯಾಯಾಲಯಕ್ಕೆ ಬಂದು ಹೋದ ಬಳಿಕ ಈ ಬೆಳವಣಿಗೆ ನಡೆದಿದೆ. ನಮ್ಮ ಕುಟುಂಬವನ್ನು ಈ ಹಿಂದೆಯೂ ವಾಲಿಬಾಲ್, ಫುಟ್ಬಾಲ್ ರೀತಿ ಬಳಸಿಕೊಳ್ಳಲಾಗಿದೆ. ಯಡಿಯೂರಪ್ಪ ಅವರನ್ನು ಸಿಲುಕಿಸಿ ಸಂಘಟನೆಯನ್ನು ಕುಗ್ಗಿಸುವ ಹುನ್ನಾರವಿದ್ದಂತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ರಾಜ್ಯ ಸರ್ಕಾರದ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗಳು ನಡೆಯುತ್ತಿವೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಎಸ್‌ವೈ ವಿರುದ್ಧದ ಪ್ರಕರಣ ಬಳಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net