

ಬೆಳಗಾವಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾದ ಭ್ರಷ್ಟಾಚಾರ ಪ್ರಕರಣದ ದಿಕ್ಕು ತಪ್ಪಿಸುವ ಉದ್ದೇಶದಿಂದ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಅಪಪ್ರಚಾರ, ಷಡ್ಯಂತ್ರ ರೂಪಿಸಲಾಗಿದೆ ಎಂದು ಸಂಸದ ಜಗದೀಶ ಶೆಟ್ಟರ್ ರಾಜ್ಯ ಸರ್ಕಾರದ ವಿರುದ್ಧ ಟೀಕಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ 2-3 ತಿಂಗಳ ಹಿಂದೆ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಈವರೆಗೆ ಸುಮ್ಮನೆ ಇದ್ದು, ಈಗ ಪ್ರಕರಣ ಬಗ್ಗೆ ಮಾತನಾಡುತ್ತಿರುವ ಹಿಂದೆ ರಾಜಕೀಯ ಷಡ್ಯಂತ್ರವಿದೆ. ರಾಹುಲ್ಗಾಂಧಿ ಅವರನ್ನು ಕೋರ್ಟ್ ಮೆಟ್ಟಿಲು ಹತ್ತಿಸಿದ್ದಕ್ಕಾಗಿ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡಲು ಹೊರಟಿದೆ. ಮಾನಸಿಕ ಅಸ್ವಸ್ಥೆ ನೀಡಿದ್ದ ದೂರು ಆಧರಿಸಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಂಧಿಸಲು ಹವಣಿಸುತ್ತಿದೆ ಎಂದು ದೂರಿದರು.
ಈ ಹಿಂದೆ ಸ್ವತಃ ಗೃಹಸಚಿವ ಡಾ. ಪರಮೇಶ್ವರ ಅವರೇ ಮಾನಸಿಕ ಅಸ್ವಸ್ಥೆ ದುರುದ್ದೇಶದಿಂದ ದೂರು ನೀಡಿದ್ದಾಳೆಂದು ಹೇಳಿಕೆ ನೀಡಿದ್ದು, ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂಬುದು ಜಗಜ್ಜಾಹೀರಾಗಿತ್ತು. 3 ತಿಂಗಳ ನಂತರ ಈ ಪ್ರಕರಣಕ್ಕೆ ಮರುಜೀವ ತುಂಬಲು ಹೊರಟಿರುವುದು ವಿಪರ್ಯಾಸ. ದ್ವೇಷ ರಾಜಕಾರಣಕ್ಕೆ ಕಟ್ಟುಬಿದ್ದು ಬಿಎಸ್‌ವೈ ಅವರನ್ನು ಕೆಣಕಲು ಹೋದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ಣಾಮ ಆಗುವುದರಲ್ಲಿ ಸಂಶಯವೇ ಇಲ್ಲ ಎಂದರು.