

ಕಮತಗಿ: ಪಟ್ಟಣಕ್ಕೆ ಹೊಂದಿಕೊಂಡು ಹಾದು ಹೋಗಿರುವ ಮಲಪ್ರಭಾ ನದಿಗೆ ಆಗಾಗ ಪ್ರವಾಹ ಉಂಟಾಗಿ ಜನತೆಗೆ ತೊಂದರೆಯಾಗುತ್ತಿದ್ದು, ನದಿಯಲ್ಲಿರುವ ನಡುಗಡ್ಡೆ ತೆರವುಗೊಳಿಸಲು ಜಿಲ್ಲಾಡಳಿತ ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಹುನಗುಂದ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡವು ಶುಕ್ರವಾರ ನದಿಗೆ ಭೇಟಿ ನೀಡಿ ಪರಿಶೀಲಿಸಿತು.
ಮಳೆ ಪ್ರಮಾಣ ಹೆಚ್ಚಳವಾದಾಗ ಮಲಪ್ರಭಾ ನದಿಯಲ್ಲಿ ನೀರಿನ ಹರಿವು ದ್ವಿಗುಣಗೊಂಡು ಪದೇಪದೆ ಪ್ರವಾಹ ಉಂಟಾಗುತ್ತಿದೆ. ಇದರಿಂದ ನದಿ ತೀರದ ಜನವಸತಿ ಪ್ರದೇಶಕ್ಕೆ ತೀವ್ರ ತೊಂದರೆಯಾಗುತ್ತಿದೆ. ಇದನ್ನು ಸ್ವಲ್ಪಮಟ್ಟಿಗಾದರೂ ತಡೆಗಟ್ಟಬೇಕು ಎಂಬ ಉದ್ದೇಶದಿಂದ ನದಿಯಲ್ಲಿರುವ ನಡುಗಡ್ಡೆ ಮತ್ತು ನದಿಯ ಪ್ರದೇಶ ಅತಿಕ್ರಮಣ ಮಾಡಿಕೊಂಡಿರುವ ಸ್ಥಳ ತೆರವುಗೊಳಿಸಿ ನದಿಯಲ್ಲಿ ನೀರು ಸರಾಗವಾಗಿ ಮುಂದೆ ಸಾಗಲು ಕ್ರಮಕೈಗೊಳ್ಳಲು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಂದಾಜು ವೆಚ್ಚದ ವರದಿಯನ್ನು ಶೀಘ್ರ ನೀಡಬೇಕು ಎಂದು ಬಾಗಲಕೋಟೆ ಜಿಲ್ಲಾಡಳಿತವು ಹುನಗುಂದ ತಹಸೀಲ್ದಾರ್ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ಕಮತಗಿ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚನೆ ನೀಡಿದೆ.
ಶುಕ್ರವಾರ ಹುನಗುಂದ ತಹಸೀಲ್ದಾರ ನಿಂಗಪ್ಪ ಬಿರಾದಾರ, ಕೃಷ್ಣಾ ಮೇಲ್ದಂಡೆ ಯೋಜನೆಯ ಕಮತಗಿ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಕೋಮಲ್ ನಾಯಕ ನೇತೃತ್ವದ ಅಧಿಕಾರಿಗಳ ತಂಡವು ಕಮತಗಿ ಹಾಗೂ ರಾಮಥಾಳ ಹತ್ತಿರದ ಮಲಪ್ರಭಾ ನದಿಯ ಒಡಲಿಗೆ ಭೇಟಿ ನೀಡಿ, ನದಿಯ ಮಧ್ಯ ಭಾಗದಲ್ಲಿರುವ ನಡುಗಡ್ಡೆಯನ್ನು ಪರಿಶೀಲನೆ ಮಾಡಿತು. ನಂತರ ರಾಮಥಾಳ ಹತ್ತಿರದ ದೊಡ್ಡ ಸೇತುವೆ ಹತ್ತಿರ ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹುನಗುಂದ ತಹಸೀಲ್ದಾರ ನಿಂಗಪ್ಪ ಬಿರಾದಾರ, ಕಮತಗಿ ಹತ್ತಿರದ ಮಲಪ್ರಭಾ ನದಿಯಲ್ಲಿ ನಡುಗಡ್ಡೆ ಇರುವ ಕಾರಣಕ್ಕೆ ಪ್ರವಾಹ ಉಂಟಾಗುತ್ತದೆ. ಹೀಗಾಗಿ ನಡುಗಡ್ಡೆ ತೆರವುಗೊಳಿಸಲು ಅಂದಾಜು ವೆಚ್ಚದ ವರದಿ ಜಿಲ್ಲಾಡಳಿತ ಕೇಳಿದ್ದು, ಶುಕ್ರವಾರ ನದಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಕಮತಗಿ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಿಗೆ ನಡುಗಡ್ಡೆ ತೆರವುಗೊಳಿಸಲು ಅಂದಾಜು ವೆಚ್ಚದ ವರದಿಯನ್ನು ಸಲ್ಲಿಸಲು ಸೂಚನೆ ನೀಡಲಾಗಿದೆ. ಜಿಲ್ಲಾಡಳಿತ ಅಥವಾ ಸರ್ಕಾರ ವಿಶೇಷ ಅನುದಾನದಡಿಯಲ್ಲಿ ಕಾಮಗಾರಿ ಕೈಗೆತ್ತಿಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.
ಹುನಗುಂದ ಶಿರಸ್ತೇದಾರ ಎಚ್.ಎಂ. ಶಿವಣಗಿ, ಕಮತಗಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎ್.ಎನ್. ಹುಲ್ಲಿಕೇರಿ, ಕಂದಾಯ ನಿರೀಕ್ಷಕ ಡಿ.ಎಸ್. ಯತ್ನಟ್ಟಿ, ಕೃಷ್ಣ ಮೇಲ್ದಂಡೆ ಯೋಜನೆಯ ಕಮತಗಿ ಉಪ ವಿಭಾಗದ ಕಿರಿಯ ಇಂಜಿನಿಯರ್ ಎಚ್.ಜಿ. ಕೊಡಗಲಿ, ಎಸ್.ಬಿ. ಗಣಾಚಾರಿ, ಗ್ರಾಮ ಲೆಕ್ಕಾಧಿಕಾರಿ ಸಚಿನ ರಾಠೋಡ ಮತ್ತಿತರರು ಇದ್ದರು.
ಮಲಪ್ರಭಾ ನದಿಯಲ್ಲಿ ಉಂಟಾಗುವ ಪ್ರವಾಹದ ಪ್ರಮಾಣ ತಗ್ಗಿಸಲು ಜಿಲ್ಲಾಡಳಿತ ನದಿಯಲ್ಲಿರುವ ನಡುಗಡ್ಡೆ ಪ್ರದೇಶ ತೆರವುಗೊಳಿಸಲು ಮುಂದಾಗಿದ್ದು, ಪರಿಶೀಲನೆ ಮಾಡಲಾಗಿದೆ. ಶೀಘ್ರ ಜಿಲ್ಲಾಡಳಿತಕ್ಕೆ ಅಂದಾಜು ವೆಚ್ಚದ ವರದಿ ಸಲ್ಲಿಸಲಾಗುವುದು. ನಿಂಗಪ್ಪ ಬಿರಾದಾರ, ತಹಸೀಲ್ದಾರ್, ಹುನಗುಂದ