

ಭಟ್ಕಳ: ಪುರಸಭೆ ವ್ಯಾಪ್ತಿಯಲ್ಲಿ ಶೇ. 50ಕ್ಕಿಂತ ಹೆಚ್ಚು ಕಟ್ಟಡಗಳು, ಲೇ ಔಟ್ಗಳು ಪರವಾನಗಿ ಪಡೆಯದೇ ನಿರ್ವಿುಸಿಕೊಂಡಿದ್ದು, ತೆರಿಗೆ ಸಂಗ್ರಹಣಾ ದೃಷ್ಟಿಯಿಂದ ಅವರಿಗೆ ಎ ಮತ್ತು ಬಿ ಖಾತೆ ಮಾಡಿಕೊಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಹೇಳಿದರು.
ಶನಿವಾರ ಭಟ್ಕಳದಲ್ಲಿ ಎಕ್ಸ್ ಪೋ ಟ್ರೇಡ್ 2025 ಅನ್ನು ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಟ್ಟಡ ಪರವಾನಗಿ ಪಡೆದುಕೊಳ್ಳದೇ ಕಟ್ಟಡ ನಿರ್ವಿುಸಿದವರು, ಲೇ ಔಟ್ ಮಾಡದೇ ಪರವಾನಗಿಗಿಂತ ಅಧಿಕ ಚದರ ಮೀಟರ್ ಕಟ್ಟಡ ಹೊಂದಿದವರು ಇ ಖಾತಾ, ಫಾರಂ ನಂ. 3 ಹೊಂದಿರದ ಕಾರಣ ಪುರಸಭೆಯವರು ತೆರಿಗೆ ವಸೂಲಿ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸ್ಥಳೀಯ ಮೂಲಸೌಕರ್ಯ ಅಬಿವೃದ್ಧಿಗೆ ಅನುದಾನ ಕೊರತೆ ಕಾಡುತ್ತಿದೆ. ಇದನ್ನು ಪರಿಗಣಿಸಿ ಸಿಎಂ ನಿರ್ದೇಶನದಂತೆ ಒಂದೇ ತಿರುವಿನಲ್ಲಿ ತೆರಿಗೆ ವಸೂಲಿ ಮಾಡಿ ಖಾತೆ ನೀಡಲು ಈಗಾಗಲೇ ಗೆಜೆಟ್ ಅನುಮತಿ ಪಡೆದಿಕೊಂಡಿದ್ದು, ಆಕ್ಷೇಪಣೆಗಾಗಿ ಪ್ರಕಟಣೆ ಹೊರಡಿಸಲಾಗಿದೆ ಎಂದರು.
ಭಟ್ಕಳದಲ್ಲಿ ನಗರೋತ್ಥಾನ ಕಾಮಗಾರಿ ಮಂದ ಗತಿಯಿಂದ ಸಾಗುತ್ತಿರುವ ಬಗ್ಗೆ ಹಾಗೂ 200 ಕೋಟಿ ಒಳಚರಂಡಿಯ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆದು ತಪ್ಪಿಸ್ಥತರ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದರು. ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯಿತಿಗೆ ಅಗತ್ಯ ಇರುವ ಸಿಬ್ಬಂದಿ ಹಾಗೂ ಅನುದಾನವನ್ನು ಆದ್ಯತೆಯ ಮೇರೆಗೆ ಪೂರೈಸುವ ಭರವಸೆ ನೀಡಿದರು. ಭಟ್ಕಳ ತಂಝೀಂ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ, ಭಟ್ಕಳ ಅಂಜುಮನ್ ಅಧ್ಯಕ್ಷ ಯೂನಿಸ್ ಖಾಜಿಯಾ, ಪುರಸಭಾ ಸದಸ್ಯ ಇಂಶಾದ್ ಇದ್ದರು.