

ಶಿವಮೊಗ್ಗ: ಶರಾವತಿ ನದಿ ಪ್ರದೇಶದಲ್ಲಿ ವಾಟರ್ ಬೇಸ್ ಅಭಿವೃದ್ಧಿಗೆ ಚಿಂತನೆ ನಡೆದಿದೆ. ನದಿಯಲ್ಲಿ ಎಲ್ಲ ಕಾಲದಲ್ಲೂ ನೀರಿರಲಿದ್ದು ಕ್ರೂಸ್, ಬೋಟ್‌ಗಳು ಓಡಾಡುವಂತೆ ಜಲಸಂಚಾರ ಮೂಲಗಳನ್ನು ಗುರುತಿಸುವ ಕೆಲಸ ಆಗುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಸಹಕಾರದಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಸಾಕಾರಗೊಳ್ಳುತ್ತಿದೆ. ನನ್ನ ಆಸೆ ಮತ್ತು ಜನರ ಅಪೇಕ್ಷೆಯಂತೆ ಜಿಲ್ಲೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ನಿಟ್ಟನಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಿದರೆ ಜಿಲ್ಲೆ ತನ್ನಿಂದ ತಾನೇ ಗುರುತಿಸಲ್ಪಡುತ್ತದೆ. ಅದು ಪ್ರವಾಸೋದ್ಯಮದ ಇರಬಹುದು, ಕೈಗಾರಿಕೆ ಇರಬಹುದು. ರೈಲ್ವೆ, ಏರ್‌ವೇಸ್ ಯೋಜನೆಗಳಿರಬಹುದು ಎಂದು ತಿಳಿಸಿದರು.
ಕೋಟೆ ಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಆಗುತ್ತಿದೆ. ಇದರಿಂದ ಪ್ರಮುಖ ರೈಲುಗಳು ಈ ಡಿಪೋದಿಂದಲೇ ಓಡಾಡುವ ಮತ್ತು ಶಿವಮೊಗ್ಗಕ್ಕೆ ಸಂಪರ್ಕ ಪಡೆಯಲಿವೆ. ಮೈಸೂರು, ಬೆಂಗಳೂರು ಜಂಕ್ಷನ್‌ಗಳಲ್ಲಿ ಒತ್ತಡ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಪ್ರಮುಖ ರೈಲುಗಳನ್ನು ಶಿವಮೊಗ್ಗಕ್ಕೆ ತಿರುಗಿಸುವ ನಿಟ್ಟಿನಲ್ಲಿ ಈಗಾಗಲೆ ಯೋಜನೆ ಸಿದ್ಧಗೊಳ್ಳುತ್ತಿದೆ ಎಂದರು.
ವಿಶೇಷವಾಗಿ ತಾಳಗುಪ್ಪ-ಹೊನ್ನಾವರ, ತಾಳಗುಪ್ಪ-ಸಿದ್ದಾಪುರ ನಡುವೆ ರೈಲು ಮಾರ್ಗಕ್ಕೆ ಸರ್ವೇ ಆಗಿ ವರದಿ ಬಂದಿದೆ. ತಾಳುಗುಪ್ಪ-ಸಿದ್ದಾಪುರ ನಡುವಿನ ಮಾರ್ಗ ವಾಣಿಜ್ಯ ದೃಷ್ಟಿಯಿಂದ ಶೇ. 80ರಷ್ಟು ಕಾರ್ಯಸಾಧುವಾಗಿದ್ದರೆ, ತಾಳಗುಪ್ಪ-ಹೊನ್ನಾವರ ಶೇ. 8ರಷ್ಟು ಮೈನಸ್ ತೋರಿಸುತ್ತಿದೆ. ತಾಳಗುಪ್ಪ-ಹೊನ್ನಾವರ ಮಾರ್ಗ ನಿರ್ಮಾಣ ವೆಚ್ಚ ಹೆಚ್ಚಾದರೂ ಅದನ್ನು ಮಾಡಬೇಕೆಂದು ನಾನು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಅವರು ರೈಲ್ವೆ ಸಚಿವರಿಗೆ ಮನವಿ ಮಾಡಿಕೊಂಡಿದ್ದೇವೆ. ಈ ಸಂಬಂಧ ರೈಲ್ವೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗಕ್ಕೆ 25 ಕೋಟಿ ರೂ. ಬಿಡುಗಡೆ ಆಗಿದೆ. ಇನ್ನೂ ಬಾಕಿ 75 ಕೋಟಿ ರೂ. ಬರಬೇಕಿದೆ. ಅದನ್ನು ತರುವಲ್ಲಿ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಶಾಸಕ ಗುರುರಾಜ್ ಗಂಟಿಹೊಳಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮಾಜಿ ಶಾಸಕರಾದ ಎಸ್.ರುದ್ರೇಗೌಡ, ಕೆ.ಜಿ.ಕುಮಾರಸ್ವಾಮಿ, ಕೆ.ಬಿ.ಅಶೋಕ್ ನಾಯ್ಕ, ಕೆ.ಬಿ.ಪ್ರಸನ್ನಕುಮಾರ್, ಮುಖಂಡರಾದ ಎಸ್.ದತ್ತಾತ್ರಿ, ಟಿ.ಡಿ.ಮೇಘರಾಜ್, ಸಿ.ಎಚ್.ಮಾಲತೇಶ್, ಕೆ.ವಿ.ಅಣ್ಣಪ್ಪ ಉಪಸ್ಥಿತರಿದ್ದರು.