

ಹುಬ್ಬಳ್ಳಿ: ಕೂಡಲಸಂಗಮ ಪಂಚಮಸಾಲಿ ಪೀಠವನ್ನು ನೋಡಿಕೊಳ್ಳಲು ಪರ್ಯಾಯ ವ್ಯವಸ್ಥೆಗೆ ಚಿಂತನೆ ಮಾಡಿದ್ದು, ಶೀಘ್ರದಲ್ಲೇ ಈ ಕುರಿತು ನಿರ್ಧಾರ ಸಹ ಕೈಗೊಳ್ಳುತ್ತೇವೆ ಎಂದು ಅಖಿಲ ಭಾರತ ಲಿಂಗಾಯತ ಪಂಚವಸಾಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರೇ ಮಲಪ್ರಭಾ ನದಿ ತೀರದಲ್ಲಿ ಮಠ ಕಟ್ಟುತ್ತೇವೆ ಎಂದು ಹೇಳುತ್ತಿದ್ದಾರೆ. ಅದನ್ನು ನಾವು ಸ್ವಾಗತಿಸುತ್ತೇವೆ. ಈ ಹಿನ್ನೆಲೆಯಲ್ಲಿ ಅವರೇ ಪೀಠ ತ್ಯಾಗ ಮಾಡುತ್ತಾರೆಯೇ ಎಂಬುದು ಕಾಲವೇ ನಿರ್ಧಾರ ಮಾಡಲಿದೆ ಎಂದರು.
ಮಠದ ಒಡೆತನ ಟ್ರಸ್ಟ್‌ಗೆ ಸೇರಿದ್ದು, ಸ್ವಾಮೀಜಿ ಅವರಿಗೆ ನಾವು ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಅವರನ್ನು ನಾವು ಮಠ ಬಿಟ್ಟು ಹೋಗಿ ಎಂದು ಹೇಳುತ್ತಿಲ್ಲ. ಅವರೇ ಬೇರೆ ಮಠ ಕಟ್ಟುತ್ತೇವೆ ಎಂದು ಹೇಳಿರುವಾಗ ನಾವು ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ. ಈ ಕುರಿತು ಟ್ರಸ್ಟ್ ಧರ್ಮದರ್ಶಿಗಳು ಸಭೆ ಸೇರಿ ಪರ್ಯಾಯ ವ್ಯವಸ್ಥೆಗೆ ಚಿಂತನೆ ಮಾಡಿದ್ದೇವೆ ಎಂದು ಹೇಳಿದರು.