

ಮಧುಗಿರಿ: ರಾಜ್ಯದ ಜನತೆಗೆ ಉತ್ಕೃಷ್ಟ ಮಟ್ಟದ ಆಂಬುಲೆನ್ಸ್ ಸೇವೆ ಒದಗಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದರು.
ಪಟ್ಟಣದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುತ್ತಿಗೆದಾರರ ಅಸಮರ್ಪಕ ಸೇವೆಯಿಂದಾಗಿ ಗೊಂದಲ ಉಂಟಾಗಿದ್ದು, ರೋಗಿಗಳಿಗೆ ಸಕಾಲಕ್ಕೆ ಅಂಬುಲೆನ್ಸ್ ದೊರೆಯುತ್ತಿಲ್ಲ. ಹೀಗಾಗಿ ಸಿಂಗಾಪುರ ದೇಶಗಳಲ್ಲಿರುವಂತಹ ಗುಣಮಟ್ಟದ ಆಂಬುಲೆನ್ಸ್ ವ್ಯವಸ್ಥೆಯನ್ನು ರಾಜ್ಯದಲ್ಲೂ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದರು.
ದೊಡ್ಡಬಳ್ಳಾಪುರದಲ್ಲಿ ನಡೆಯುವ ಕಾರ್ಯಕ್ರಮ ಮುಂಬರುವ ಚುನಾವಣೆಗೆ ದಿಕ್ಸೂಚಿಯಾಗಿದೆ. ಸಿಎಂ ಬೊಮ್ಮಾಯಿ ಸರ್ಕಾರ 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜು.28ರಂದು ಸರ್ಕಾರದ 3 ವರ್ಷದ ಸಾಧನೆಯನ್ನು ಜನರ ಮಧ್ಯೆ ಹಂಚಿಕೊಳ್ಳುವ ಉದ್ದೇಶದಿಂದ ಜನೋತ್ಸವ, ಸಾರ್ಥಕತೆ, ಸಬಲೀಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಒಕ್ಕಲಿಗ ಸಮುದಾಯದಂತೆ ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿದ್ದು, ನಾನೂ ಸಿಎಂ ಆಕಾಂಕ್ಷಿ ಎಂಬ ಜಮೀರ್ ಅಹಮದ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಡಾ.ಸುಧಾಕರ್, ಒಂದು ಜಾತಿ, ಸಮುದಾಯದಿಂದ ಸಿಎಂ ಆಗಲು ಸಾಧ್ಯವಿಲ್ಲ. ವ್ಯಕ್ತಿತ್ವ, ಚಾರಿತ್ರ್ಯ ನೋಡಿ ಜನತೆ ನಾಯಕರನ್ನು ತೀರ್ಮಾನಿಸುತ್ತಾರೆ ಎಂದರು.
2018ರಲ್ಲೇ ನನ್ನ ಕೊನೆಯ ಚುನಾವಣೆ ಎಂದಿದ್ದ, ಸಿದ್ದರಾಮಯ್ಯ ಮತ್ತೆ ಸ್ಪರ್ಧಿಸುತ್ತಿದ್ದು, ನಿವೃತ್ತಿ ಘೋಷಿಸಿ ಎಂದು ಯಾರೂ ಕೇಳಿರಲಿಲ್ಲ. ಆದರೆ ನಿವೃತ್ತಿ ಘೋಷಿಸಿ ಮತ್ತೆ ಸ್ಪರ್ಧಿಸುತ್ತಿರುವುದು ಚುನಾವಣೆ ಗೆಲ್ಲುವ ತಂತ್ರ ಎಂದು ಕುಟುಕಿದರು.
ಸಮಸ್ಯೆಗಳ ಅರಿವಿದೆ: ಮಧುಗಿರಿ ಉಪವಿಭಾಗದ ಪಾವಗಡ ತಾಲೂಕು ಜಿಲ್ಲಾ ಕೇಂದ್ರಕ್ಕೆ ಸುಮಾರು 100 ಕಿ.ಮೀ ದೂರವಿದ್ದು, ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಪಡೆಯಲು ತೊಂದರೆಯಾಗುತ್ತಿರುವುದರ ಬಗ್ಗೆ ಸಚಿವರ ಗಮನ ಸೆಳೆದಾಗ ನಾನೂ ಸಹ ತುಮಕೂರು ಜಿಲ್ಲೆಯಲ್ಲಿ ವ್ಯಾಸಂಗ ಮಾಡಿದ್ದು, ಈ ಭಾಗದ ಸಮಸ್ಯೆಗಳ ಬಗ್ಗೆ ಅರಿವಿದೆ. ಉಪವಿಭಾಗ ಕೇಂದ್ರದಲ್ಲಿ ಸುಸಜ್ಜಿತ ಆಸ್ಪತ್ರೆ ತೆರೆದಲ್ಲಿ ತುರ್ತು ಸಂದರ್ಭದಲ್ಲಿ ಅನುಕೂಲವಾಗಲಿದೆ, ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಚಿತ್ರದುರ್ಗ ಯುವ ಮೋರ್ಚಾ ಅಧ್ಯಕ್ಷ ಹನುಮಂತೇಗೌಡ, ಮಧುಗಿರಿ ಜಿಲ್ಲಾ ಪ್ರಭಾರಿ ವಿಕಾಸ್ ಪುತ್ತೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವಿ, ಜಯಣ್ಣ, ತಿಮ್ಮಜ್ಜ, ಕಾರ್ಯಾಲಯ ಕಾರ್ಯದರ್ಶಿ ಸುರೇಶ್, ಮಾಧ್ಯಮ ಪ್ರಮುಖ್ ಆದಿಶೇಷ ಗುಪ್ತ, ಉಪಾಧ್ಯಕ್ಷ ಲಕ್ಷ್ಮೀಪತಿ, ಮಂಡಲ ಅಧ್ಯಕ್ಷ ಪಿ.ಎಲ್. ನರಸಿಂಹಮೂರ್ತಿ ಇತರರಿದ್ದರು.